ಮಡಿಕೇರಿ:ಎಂಟು ತಿಂಗಳ ಮಗುವಿನ ಗಂಟಲಲ್ಲಿ ಎಲ್‌ಇಡಿ ಬಲ್ಬ್! ವೈದ್ಯರು ಮಾಡಿದ್ದೇನು ಗೊತ್ತಾ?
ಮಡಿಕೇರಿ, ಜೂ. 26: ಆಕಸ್ಮಿಕವಾಗಿ ಎಲ್‌ಇಡಿ ಬಲ್ಬ್ ನುಂಗಿ ಗಂಟಲಿನಲ್ಲಿ ಸಿಲುಕಿದ್ದ 8 ತಿಂಗಳ ಮಗುವನ್ನು ಮಡಿಕೇರಿ ನಗರದ ವೈವಾಸ್ ಆಸ್ಪತ್ರೆಯ ವೈದ್ಯರಾದ ಡಾ. ರಾಜಶ್ರೀ ಮತ್ತು ಡಾ. ಕುಶ್ವಂತ್ ಕೋಳಿಬೈಲು ಯಶಸ್ವಿಯಾಗಿ ಹೊರತೆಗೆದು ಮಗುವಿನ ಜೀವ ಉಳಿಸಿದ್ದಾರೆ.
ಮಗು ನಿರಂತರವಾಗಿ ಅಳುತ್ತಿದ್ದು, ಉಸಿರಾಟಕ್ಕೆ ತೊಂದರೆಯಾಗುತ್ತಿತ್ತು. ಕಾರಣ ತಿಳಿಯದೆ ಆತಂಕಗೊಂಡ ಪೋಷಕರು ಮಗುವನ್ನು ಮಡಿಕೇರಿಯ ವೈವಾಸ್ ಆಸ್ಪತ್ರೆಗೆ ಕರೆತಂದಿದ್ದರು. ತಪಾಸಣೆ ನಡೆಸಿದಾಗ ಮಗುವಿನ ಗಂಟಲಿನಲ್ಲಿ ಎಲ್‌ಇಡಿ ಬಲ್ಬ್ ಸಿಲುಕಿರುವುದು ಪತ್ತೆಯಾಗಿದೆ. ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ, ಯಾವುದೇ ಅಪಾಯವಿಲ್ಲದೆ ಬಲ್ಬ್ ಅನ್ನು ಹೊರತೆಗೆದಿದೆ. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಡಾ. ರಾಜಶ್ರೀ ತಿಳಿಸಿದ್ದಾರೆ.

