ಮಡಿಕೇರಿ 'ಹನಿ' ಟ್ರ್ಯಾಪ್: ಗಣ್ಯರನ್ನೂ ಬಲೆಗೆ ಕೆಡವಿದ್ದ ಗ್ಯಾಂಗ್!

Dec 31, 2025 - 13:27
 0  2k
ಮಡಿಕೇರಿ 'ಹನಿ' ಟ್ರ್ಯಾಪ್: ಗಣ್ಯರನ್ನೂ ಬಲೆಗೆ ಕೆಡವಿದ್ದ ಗ್ಯಾಂಗ್!

ಮಡಿಕೇರಿ, ಡಿ.31: ಇತ್ತೀಚೆಗೆ ಮಂಡ್ಯದ ವ್ಯಕ್ತಿಯೋರ್ವರ ಮೇಲೆ ನಡೆದ ಹನಿ ಟ್ರ್ಯಾಪ್ ಪ್ರಕರಣದ ತನಿಖೆಯ ವೇಳೆ, ಮಡಿಕೇರಿ ನಗರದಲ್ಲಿಯೂ ಇದೇ ಜಾಲವು ಭಾರೀ ವಸೂಲಿ ನಡೆಸಿರುವ ಶಂಕೆ ಬೆಳಕಿಗೆ ಬಂದಿದೆ. 

ಮಹಿಳೆ ಮತ್ತು ಆಕೆಯ ಸಹಚರರ ತಂಡಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮಾರಣಾಂತಿಕ ಹಲ್ಲೆಗೆ ಒಳಗಾಗಿ, ಅರೆಬೆತ್ತಲೆ ಸ್ಥಿತಿಯಲ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಬಂಧಿತ ಮಹಿಳೆ ಹಾಗೂ ಸಹಚರರನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ, ಮಡಿಕೇರಿಯಲ್ಲಿನ ಹಲವು ಪ್ರಭಾವಿ ವ್ಯಕ್ತಿಗಳನ್ನು ಹನಿ ಟ್ರ್ಯಾಪ್‌ಗೆ ಒಳಪಡಿಸಿ, ಖಾಸಗಿ ಕ್ಷಣಗಳ ವೀಡಿಯೋ ಚಿತ್ರೀಕರಣ ಮಾಡಿ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ವೈಯಕ್ತಿಕ ವಿಚಾರಗಳನ್ನು ಅಸ್ತ್ರವಾಗಿ ಬಳಸಿಕೊಂಡು ಬ್ಲ್ಯಾಕ್‌ಮೇಲ್ ನಡೆಸಿರುವ ಆರೋಪಗಳು ತನಿಖಾಧಿಕಾರಿಗಳ ಗಮನ ಸೆಳೆದಿವೆ.

ನಗರದ ಸ್ಥಾಯಿ ಸಮಿತಿ ಸದಸ್ಯ ಹಾಗೂ ಸ್ಥಳೀಯ ಬ್ಯಾಂಕ್‌ನ ನಿರ್ದೇಶಕರಾಗಿರುವ ಪ್ರಭಾವಿ ವ್ಯಕ್ತಿಯೊಬ್ಬರು ಈ ಜಾಲಕ್ಕೆ ಸಿಲುಕಿ ದೊಡ್ಡ ಮೊತ್ತ ಪಾವತಿಸಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಅಲ್ಲದೆ, ಖ್ಯಾತ ಗುತ್ತಿಗೆದಾರರು, ಸಮಾಜಸೇವಾ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿರುವ ಉದ್ಯಮಿಗಳು ಹಾಗೂ ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು ಸೇರಿದಂತೆ ಹಲವು ಗಣ್ಯರು ಈ ತಂಡದ ಬಲೆಗೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸರ ಬಳಿ ಕೆಲವು ಮಹತ್ವದ ವಿವರಗಳು ಲಭ್ಯವಿದ್ದರೂ, ಸಂಬಂಧಪಟ್ಟವರು ದೂರು ನೀಡದ ಕಾರಣ ಸದ್ಯ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 0
Love Love 0
Funny Funny 4
Angry Angry 1
Sad Sad 0
Wow Wow 2