ಮಡಿಕೇರಿ:ಸ್ವಾತಂತ್ರ್ಯ ದಿನಾಚರಣೆಯನ್ನೇ ಮರೆತ ಅಧಿಕಾರಿಗಳು
admincoorgdaily

ಮಡಿಕೇರಿ: ಒಂದೆಡೆ ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದರೆ, ಮತ್ತೊಂದೆಡೆ ಕೊಡಗು ಜಿಲ್ಲೆಯ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯೇ ನಡೆಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೂರನೇ ಶನಿವಾರದ ನೆಪದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಚೇರಿಗೆ ಗೈರಾಗಿದ್ದು, ಮಧ್ಯಾಹ್ನವಾದರೂ ರಾಷ್ಟ್ರಧ್ವಜ ಹಾರಿಸದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಡಿಕೇರಿ ಜಿಲ್ಲಾ ಕ್ರೀಡಾಂಗಣದ ಸಮೀಪದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ.
ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯಾದರೂ ಧ್ವಜಾರೋಹಣ ನಡೆದಿಲ್ಲ. ಕಚೇರಿಗೆ ಬೀಗ ಹಾಕಿದ್ದು, ಯಾವುದೇ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಸ್ಥಳದಲ್ಲಿ ಕಾಣಿಸಿಕೊಂಡಿಲ್ಲ. ರಾಷ್ಟ್ರೀಯ ಹಬ್ಬದ ದಿನವೂ ಕಚೇರಿ ಮುಂಭಾಗದಲ್ಲಿ ರಾಷ್ಟ್ರಧ್ವಜ ಹಾರಿಸದೇ ಇರುವುದನ್ನು ಕಂಡ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸುವ ದಿನದಲ್ಲೇ ಸರ್ಕಾರಿ ಇಲಾಖೆಯ ಈ ನಿರ್ಲಕ್ಷ್ಯ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಮೂರನೇ ಶನಿವಾರ ಎಂಬ ಕಾರಣವನ್ನು ಮುಂದಿಟ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಚೇರಿಗೆ ಆಗಮಿಸದೇ ಇರುವುದರಿಂದ ಧ್ವಜಾರೋಹಣವೇ ನಡೆಯದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರಿ ಇಲಾಖೆಯಲ್ಲೇ ರಾಷ್ಟ್ರೀಯ ಹಬ್ಬಕ್ಕೆ ಅಗತ್ಯ ಗೌರವ ದೊರೆಯದಿರುವುದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ."ರಾಷ್ಟ್ರೀಯ ಹಬ್ಬದ ದಿನ ಧ್ವಜಾರೋಹಣ ಮಾಡದೇ ಇರುವುದು ಖಂಡನೀಯ.
ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು." "ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿರುವ ಸಂದರ್ಭದಲ್ಲಿ, ಮಡಿಕೇರಿಯ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣವೇ ನಡೆಯದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿರ್ಲಕ್ಷ್ಯದ ವಿರುದ್ಧ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.