Kodagu

ಮಡಿಕೇರಿ: ನಾಲಡಿ‌ ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ‌ ಅತ್ಯಾಚಾರ ಪ್ರಕರಣ,ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ

admincoorgdaily

ಮಡಿಕೇರಿ: ನಾಲಡಿ‌ ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ‌ ಅತ್ಯಾಚಾರ ಪ್ರಕರಣ,ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ

ಮಡಿಕೇರಿ:ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಮಡಿಕೇರಿ ತಾಲೂಕ, ನಾಲಡಿ ಗ್ರಾಮದ ನಿವಾಸಿ ಜಯ ವೈ.ಎಂ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೊಡಗು, ಮಡಿಕೇರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಘಟನೆ ಹಿನ್ನೆಲೆ : ಮಡಿಕೇರಿ ತಾಲೂಕು, ನಾಲಡಿ ಗ್ರಾಮದ ಲೈನ್ ಮನೆಯಲ್ಲಿ ತನ್ನ ಹೆಂಡತಿಯೊಂದಿಗೆ ವಾಸವಿದ್ದ ಆರೋಪಿಯು 17 ವರ್ಷದ ಅಪ್ರಾಪ್ತ ಬಾಲಕಿಯನ್ನು 2021ರ ಜುಲೈ ತಿಂಗಳಲ್ಲಿ ಪರಿಚಯ ಮಾಡಿಕೊಂಡು ಆಕೆಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು 2021ರ ಆಗಸ್ಟ್ ತಿಂಗಳಿಂದ ನವೆಂಬರ್ 2021 ರ ವರಗೆ ಆಕೆಯ ಜೊತೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯು ಗರ್ಭಿಣಿಯಾಗಲು ಕಾರಣನಾಗಿರುತ್ತಾನೆ ಎಂದು ನೊಂದ ಬಾಲಕಿಯ ತಾಯಿ ನೀಡಿದ ದೂರಿನ ಸಂಬಂಧ ಮಡಿಕೇರಿಯ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು,

 ಪ್ರಕರಣದ ತನಿಖೆಯನ್ನು ಕೊಡಗು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವೆಂಕಟೇಶ್ ಪಿ.ವಿ ಮತ್ತು ಮುದ್ದು ಮಾದೇವ ಎಂ ಇವರು ನಡೆಸಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕೋ ಕಾಯ್ದೆ ಅಡಿಯ ಅಪರಾಧಕ್ಕಾಗಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

 ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌ।। ಸುರೇಂದ್ರ ಜಿ ಇವರು ವಿಚಾರಣೆ ಕೈಗೊಂಡು ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಲೈಂಗಿಕ ಅತ್ಯಾಚಾರ ಅಪರಾಧಕ್ಕೆ ಪೋಕೋ ಕಾಯ್ದೆ ಅಡಿಯಲ್ಲಿ 20 ವರ್ಷ ಕಠಿಣ ಸಜೆ ಮತ್ತು Rs.20,000/- ದಂಡ ., ನೊಂದಬಾಲಕಿಗೆ ನಾಲ್ಕು ಲಕ್ಷ ಪರಿಹಾರ ನೀಡಬೇಕೆಂದು ತೀರ್ಪು ನೀಡಿ ಆದೇಶಿಸಿದ್ದಾರೆ. ಸರಕಾರದ ಪರ ವಿಶೇಷ ಅಭಿಯೋಜಕರಾದ ಬಿ ಎಸ ರುದ್ರ ಪ್ರಸನ್ನ ವಾದ ಮಂಡಿಸಿರುತ್ತಾರೆ.