ಮಡಿಕೇರಿ: ಎಸ್‌ಆರ್‌ವಿ ಫುಟ್ಬಾಲ್ ಚಾಂಪಿಯನ್ಸ್ ಲೀಗ್; ಟೀಮ್ ಒನ್ ಟಚ್ ಚಾಂಪಿಯನ್
admincoorgdaily

ಮಡಿಕೇರಿ:ಮಂಜಿನ ನಗರಿ ಮಡಿಕೇರಿಯ ಗಾಂಧಿ ಮೈದಾನವು ಕಳೆದ ಎರಡು ದಿನಗಳ ಕಾಲ ಕ್ರೀಡೆ, ತಂತ್ರಜ್ಞಾನ ಹಾಗೂ ಸ್ನೇಹ ಸಂಬಂಧಗಳ ಸಂಗಮಕ್ಕೆ ಸಾಕ್ಷಿಯಾಯಿತು. ಶ್ರೀ ರಾಜೇಶ್ವರಿ ವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾದ ಎಸ್‌ಆರ್‌ವಿ ಫುಟ್ಬಾಲ್ ಚಾಂಪಿಯನ್ ಲೀಗ್ ಸೀಸನ್–3, ಮೋಟೋ ಎಕ್ಸ್ಪೋ ಹಾಗೂ ಹಳೆ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮಗಳು ಅಪಾರ ಜನಸಂದಣಿ, ಉತ್ಸಾಹ ಹಾಗೂ ಸಂಭ್ರಮದ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಎಸ್‌ಆರ್‌ವಿ ಫುಟ್ಬಾಲ್ ಚಾಂಪಿಯನ್ ಲೀಗ್ ಸೀಸನ್–3ರ ಫೈನಲ್ ಪಂದ್ಯದಲ್ಲಿ ಟೀಮ್ ಒನ್ ಟಚ್ ತಂಡವು ಟೀಮ್ ಅಶ್ ರನ್ನರ್ಸ್ ವಿರುದ್ಧ 1–0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೀಮ್ ಅಶ್ ರನ್ನರ್ಸ್ ರನ್ನರ್ಸ್-ಅಪ್ ಸ್ಥಾನ ಪಡೆದುಕೊಂಡಿತು. ಮೂರನೇ ಸ್ಥಾನವನ್ನು ಸ್ಟ್ರೈಕರ್ಸ್ ಸ್ಕ್ವಾಡ್, ನಾಲ್ಕನೇ ಸ್ಥಾನವನ್ನು ಆರ್‌ಆರ್‌ಎಫ್‌ಸಿ ತಂಡ ಪಡೆದುಕೊಂಡವು. ಒಟ್ಟು 12 ತಂಡಗಳು ಟ್ರೋಫಿಗಾಗಿ ಸೆಣಸಾಡಿದ ಈ ಲೀಗ್‌ನಲ್ಲಿ ನೇರ ಪ್ರಸಾರ, ಶಿಸ್ತಿನ ಸಂಘಟನೆ ಹಾಗೂ ಕ್ರೀಡಾಸ್ಫೂರ್ತಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಮೊದಲ ಕ್ವಾಲಿಫೈಯರ್‌ನಲ್ಲಿ ಟೀಮ್ ಅಶ್ ರನ್ನರ್ಸ್ 1–0 ಗೋಲುಗಳ ಜಯದೊಂದಿಗೆ ನೇರವಾಗಿ ಫೈನಲ್ ಪ್ರವೇಶಿಸಿತು. ಎಲಿಮಿನೇಟರ್ ಪಂದ್ಯದಲ್ಲಿ ಸ್ಟ್ರೈಕರ್ಸ್ ಸ್ಕ್ವಾಡ್ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಆರ್‌ಆರ್‌ಎಫ್‌ಸಿ ತಂಡವನ್ನು 3–2 ಅಂತರದಲ್ಲಿ ಮಣಿಸಿ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟಿತು. ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಟೀಮ್ ಒನ್ ಟಚ್ ಹಾಗೂ ಸ್ಟ್ರೈಕರ್ಸ್ ಸ್ಕ್ವಾಡ್ ನಡುವಿನ ಪಂದ್ಯ 1–1 ಸಮಬಲದಲ್ಲಿ ಅಂತ್ಯಗೊಂಡು, ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಟೀಮ್ ಒನ್ ಟಚ್ 5–4 ಅಂತರದಲ್ಲಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.
ವೈಯಕ್ತಿಕ ಪ್ರಶಸ್ತಿಗಳು: ಟಾಪ್ ಸ್ಕೋರರ್ – ರೌಫ್ (ಟೀಮ್ ಅಶ್) ಬೆಸ್ಟ್ ಡಿಫೆಂಡರ್ – ಅಭಯ್ (ಟೀಮ್ ಅಶ್) ಉತ್ತಮ ಗೋಲ್ ಕೀಪರ್ – ಅಶ್ರಫ್ (ಟೀಮ್ ಒನ್ ಟಚ್) ಉದಯೋನ್ಮುಖ ಆಟಗಾರ – ಸೂಫಿಯನ್ (ಆರ್‌ಆರ್‌ಎಫ್‌ಸಿ) ಸರಣಿ ಪುರುಷೋತ್ತಮ – ಶಮನ್ (ಟೀಮ್ ಒನ್ ಟಚ್) ಪಡೆದುಕೊಂಡರು.