ಮಡಿಕೇರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ: ಗ್ಯಾರಂಟಿ ಯೋಜನೆ ಪ್ರಗತಿ ಬಗ್ಗೆ ಮಾಹಿತಿ ಪಡೆದ ಮಂದ್ರೀರ ಮೋಹನ್‍ದಾಸ್
ಮಡಿಕೇರಿ ಜು.30:-ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಸಭೆ ನಡೆಯಿತು.
ಗೃಹಲಕ್ಷ್ಮಿ ಯೋಜನೆ: ಶಿಶುಅಭಿವೃದ್ದಿ ಇಲಾಖೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮೇ ಮಾಹೆಯಲ್ಲಿ 1,05,392 ಫಲಾನುಭವಿಗಳಿಗೆ ಒಟ್ಟುರೂ. 2,10,78,400 ಹಣ ಬಿಡುಗಡೆಯಾಗಿದ್ದು ಗೃಹಲಕ್ಷ್ಮಿ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಧನಸಹಾಯದ ಮೊತ್ತವನ್ನು ಬ್ಯಾಂಕ್ ಖಾತೆಯಿಂದ ಸರ್ಕಾರದ ಖಾತೆಗೆ ಜಮೆ ಮಾಡುವ ಕುರಿತು ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 10.07.2026 ರಂದು ಬಿಎಲ್‍ಬಿಸಿ ಸಭೆ ಏರ್ಪಡಿಸಲಾಯಿತು.
ಸಭೆಯಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 711 ಗೃಹಲಕ್ಷ್ಮಿ ಫಲಾನುಭವಿಗಳು ಮರಣ ಹೊಂದಿರುವ ಮಾಹಿತಿ ಲಭ್ಯವಾಗಿದ್ದು, ಲೀಡ್ ಬ್ಯಾಂಕ್ ಮ್ಯಾನೇಜರ್ ಅವರು ಪ್ರತಿ ಮರಣ ಫಲಾನುಭವಿಯ ಬ್ಯಾಂಕ್ ಖಾತೆಯ ಐಎಫ್‍ಎಸ್‍ಸಿ ಕೋಡ್ ನೀಡುವಂತೆ ತಿಳಿಸಿದರು.
ಅದರಂತೆ ಆಹಾರ ಶಾಖೆಯವರಿಗೆ ಪತ್ರ ಮುಖೇನ ಗ್ರಾಮವಾರು ಮಾಹಿತಿ ಕೇಳಿದ್ದು,ಮಾಹಿತಿ ಪಡೆದ ನಂತರ ಐಎಫ್‍ಎಸ್‍ಸಿ ಕೋಡ್ ಮಹಿತಿಯನ್ನು ಕಲೆ ಹಾಕಿ ಲೀಡ್ ಬ್ಯಾಂಕ್ ಇವರಿಗೆ ಮುಂದಿನ ಕ್ರಮಕ್ಕಾಗಿ ಮಾಹಿತಿ ನೀಡಲಾಗುವುದು ಹಾಗೂ ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಂದ ಮರಣ ದೃಢೀಕರಣ ವಿತರಿಸುವ ಬಗ್ಗೆ ಪ್ರತಿ ತಿಂಗಳು ಮಾಹಿತಿ ಪಡೆದು ಪರಿಶೀಲಿಸಿ ಗೃಹಲಕ್ಷ್ಮಿ ಫಲಾನುಭವಿ ಮರಣ ಹೊಂದಿದ್ದರೆ ಇವರ ಮರಣ ದೃಢಿಕರಣ ಪತ್ರ, ಆಧಾರ್ ಕಾರ್ಡ್ ಪಡೆದುಕೊಂಡು ಮರಣ ಹೊಂದಿದವರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುವುದನ್ನು ಸ್ಧಗಿತಗೊಳಿಸಿ, ಈ ಕುಟುಂಬದ ಅರ್ಹ ಮಹಿಳಾ ಸದಸ್ಯರು ಇದ್ದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕ್ರಮವಹಿಸುವಂತೆ ತಿಳಿಸಿದ್ದು ಅದರಂತೆ ಗೂಗಲ್ ಶೀಟ್ ರಚಿಸಿದ್ದು ಪ್ರತಿ ಗ್ರಾಮ ಪಂಚಾಯತಿಯವರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಅರ್ಜಿ ಮರುಪರಿಶೀಲನೆ ಮಾಡುವ ಸಂಬಂಧ ಮಾಸ್ಟರ್ ಟ್ರೈನರ್ ಗಳಿಗೆ ತರಬೇತಿ ನೀಡಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮನೆಗೆ ತೆರಳಿ ಪೇಸ್ ಕ್ಯಾಪ್ಚರ್ ಮಾಡುವ ಮುಖಾಂತರ ಮರುಪರಿಶೀಲನೆ ಮಾಡಲು ಪ್ರಧಾನ ಕಚೇರಿಯಿಂದ ನಿರ್ದೇಶನ ನೀಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಅಧ್ಯಕ್ಷರು ಮಾತನಾಡಿ ಗೃಹಲಕ್ಷ್ಮಿ ಯೋಜನೆಗೆ 03 ವರ್ಷ ತುಂಬಿರುವುದರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುವಂತೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಇವರಿಂದ ಪತ್ರ ಬಂದಿದ್ದು, ಅದರಂತೆ ಮಡಿಕೇರಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಮವಹಿಸುವಂತೆ ಸಭೆಯಲ್ಲಿ ತಿಳಿಸಿದರು.
ಶಕ್ತಿ ಯೋಜನೆ: ಶಕ್ತಿ ಯೋಜನೆಯಲ್ಲಿ ಒಟ್ಟು 1,85,14,504 ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು 4,54,103 ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಸದರಿ ಯೋಜನೆ ಪಡೆದುಕೊಂಡಿದ್ದಾರೆ, ಸರಾಸರಿ 16,747 ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿದ್ದು ಶಕ್ತಿ ಯೋಜನೆಯಿಂದ 21/07/2026 ರ ವರೆಗೆ ಒಟ್ಟು 81,68,82,131 ರೂ. ಸಂಸ್ಥೆಗೆ ಆದಾಯ ಬಂದಿರುತ್ತದೆ ಎಂದು ಇಲಾಖೆಯ ಸಿಬ್ಬಂದಿಯವರು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ: ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ 2024,2025 ಮತ್ತು 2026 ರಲ್ಲಿ ಪದವಿ ಮತ್ತು ಡಿಪೆÇ್ಲೀಮಾ ಉತ್ತೀರ್ಣರಾಗಿ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಅಲ್ಲದೆ ಈ ಯೋಜನೆಯ ಪ್ರಯೋಜನ ಮುಂದುವರಿಸಬೇಕಿದ್ದಲ್ಲಿ ಪ್ರತಿ ತಿಂಗಳ 25ನೇ ತಾರೀಖಿನೊಳಗೆ ಸ್ವಯಂ ಘೋಷಣೆ ಮಾಡಬೇಕು, ನಿರುದ್ಯೋಗಿಗಳು ಸ್ವಯಂ ದೃಢೀಕರಣ ನೀಡಿದ್ದಲ್ಲಿ ಮಾತ್ರ ಡಿಬಿಟಿ ಮೂಲಕ ನಿರುದ್ಯೋಗ ಭತ್ಯೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲಾಖಾ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು ಮತ್ತು ಜೂನ್ ಮಾಹೆಯವರೆಗೆ ಒಟ್ಟು 639 ಜನ ನೋಂದಣಿಯಾಗಿದ್ದು, ಒಟ್ಟು 1,59,49,500 ರೂ.ಡಿಬಿಟಿ ಯಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆ: ಇಲಾಖಾಧಿಕಾರಿ ಅವರು ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ 52713 ಅರ್ಹ ವಿದ್ಯುತ್ ಸ್ಥಾವರಗಳಿದ್ದು, ಗೃಹಜ್ಯೋತಿ ಯೋಜನೆಯಡಿ 52121 ನೋಂದಣಿಗೊಂಡ ಅರ್ಜಿಗಳಾಗಿದ್ದು, 592 ಸ್ಥಾವರಗಳು ಬಾಕಿ ಇದ್ದು, ಶೇ. 98.88 ಶೇಕಡವಾರು ಪ್ರಗತಿಯಾಗಿದ್ದು ಮೇ-2026 ಹಾಗೂ ಜೂನ್-2026 ಮಾಹೆಗಳಲ್ಲಿ 1310 ಸ್ಥಾವರಗಳು ಹೊಸದಾಗಿ ಸಂಪರ್ಕಗೊಂಡಿದ್ದು, ಮಾಸಾಂತ್ಯದೊಳಗಾಗಿ ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಲ್ಪಡುತ್ತದೆ ಹಾಗೂ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೆ 17,250 ಫಲಾನುಭವಿಗಳ ಪುನರ್ ಪರಿಶೀಲನೆ ಮುಗಿದಿದ್ದು, ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆ ಮಾಡಲು ಪ್ರತಿ ಮನೆಗೂ ಮೀಟರ್ ರೀಡರ್ ಗಳು ಹಾಗೂ ಲೈನ್‍ಮ್ಯಾನ್ ಗಳು ಭೇಟಿ ನೀಡುತ್ತಿರುವ ಬಗ್ಗೆ ಹಾಗೂ ಮಳೆಯಿಂದ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ 599 ಕಂಬಗಳು ಹಾನಿಗೊಂಡಿದ್ದು ಈ ಕಂಬಗಳನ್ನು ಬದಲಾಯಿಸಿ ಹೊಸ ಕಂಬಗಳನ್ನು ಹಾಕಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸದಸ್ಯರಾದ ಪ್ರಭು ರೈ ಅವರು ಮಾತನಾಡಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಮರುಪರಿಶೀಲನೆಯ ಪ್ರಗತಿ ಕುಂಠಿತವಾಗಿದ್ದು ಪ್ರಗತಿ ಸಾಧಿಸುವಂತೆ ಹಾಗೂ ಮಡಿಕೇರಿ ನಗರದ ಕೋಟೆ ರಸ್ತೆಯಲ್ಲಿ, ರಾಜರಾಜೇಶ್ವರಿ ಶಾಲೆ ಸಮೀಪ ಹಾಗೂ ಹೊಸ ತಹಶೀಲ್ದಾರರ ಕಚೇರಿ ಬಳಿ ಹಳೆ ಕಂಬಗಳನ್ನು ತೆರವುಗೊಳಿಸಿ ರಸ್ತೆ ಬದಿ ಹಾಕಲಾಗಿದ್ದು ಈ ಕಂಬಗಳನ್ನು ತೆರವುಗೊಳಿಸುವಂತೆ ತಿಳಿಸಿದರು.
ಅನ್ನಭಾಗ್ಯ ಯೋಜನೆ: ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 38,226 ಪಡಿತರ ಚೀಟಿ ಇದ್ದು 1,21,005 ಒಟ್ಟು ಫಲಾನುಭವಿಗಳಿರುತ್ತಾರೆ ಅದರಲ್ಲಿ 1893 ಎಎವೈ ಪಡಿತರ ಚೀಟಿ ಇದ್ದು 7543 ಎಎವೈ ಫಲಾನುಭವಿಗಳು ಇರುತ್ತಾರೆ, 21,847 ಪಿ.ಹೆಚ್ ಹೆಚ್ ಪಡಿತರ ಚೀಟಿ ಇದ್ದು 70,932 ಫಲಾನುಭವಿಗಳು, 14,486 ಎನ್‍ಪಿಹೆಚ್‍ಹೆಚ್ ಪಡಿತರ ಚೀಟಿ ಇದ್ದು 42,530 ಫಲಾನುಭವಿಗಳಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ ಪತ್ತೆ ಹಚ್ಚಿರುವ ಅನರ್ಹ ಫಲಾನುಭವಿಗಳ ಸಂಖ್ಯೆ 1388 ಆಗಿದೆ ಹಾಗೂ ಪ್ರಸ್ತುತ ಆಹಾರ ಇಲಾಖೆಯಲ್ಲಿ ಹೊಸಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದನ್ನು ಸ್ಥಗಿತಗೊಳಿಸಲಾಗಿದ್ದು, ಆಸ್ಷತ್ರೆ ಚಿಕಿತ್ಸೆಗಾಗಿ ಹೊಸಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ಸದಸ್ಯರ ಹೆಸರು ಸೇರ್ಪಡೆ ಮಾಡುವ/ ವರ್ಗಾವಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮುಂದುವರೆದು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೊಂದಿರುವ ಬಿ.ಪಿ.ಎಲ್ ಪಡಿತರ ಚೀಟಿಗೆ ಪರಿಶಿಷ್ಟರ ಜಾತಿ ಪ್ರಮಾಣ ಪತ್ರವನ್ನು ಮ್ಯಾಪಿಂಗ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಜಾತಿ ಪ್ರಮಾಣ ಪತ್ರ ಮ್ಯಾಂಪಿಂಗ್ ಮಾಡುವುದಕ್ಕೆ ಹಾಗೂ ಅನ್ನಭಾಗ್ಯ ಯೋಜನೆಗೆ ಯಾವುದೇ ರೀತಿಯ ಸಂಬಂಧವಿರುವುದಿಲ್ಲ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಇದರ ಬಗ್ಗೆ ಗೊಂದಲಕ್ಕೀಡಾಗುವ ಅವಶ್ಯತೆ ಇಲ್ಲ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
