Kodagu

ಮಡಿಕೇರಿ:ಬೆಟ್ಟತ್ತೂರುವಿನಲ್ಲಿ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿ

admincoorgdaily

ಮಡಿಕೇರಿ:ಬೆಟ್ಟತ್ತೂರುವಿನಲ್ಲಿ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿ

ಮಡಿಕೇರಿ; ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಕಾಡಾನೆ ದಾಳಿಯಿಂದ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಮೃತ ಬಾಲಕಿಯನ್ನು ಪೂಜಾ (16) ಎಂದು ಗುರುತಿಸಲಾಗಿದೆ. ಆಕೆ ಬೆಟ್ಟತ್ತೂರು ಗ್ರಾಮದ ಗಿರೀಶ್ ಅವರ ಪುತ್ರಿ ಆಗಿದ್ದು, ಮಡಿಕೇರಿಯ ಸಂತ ಜೋಸೆಫ್ ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಘಟನೆ ವಿವರ; ಶನಿವಾರ ಸಂಜೆ 5:30ರ ವೇಳೆಗೆ ಪೂಜಾ ಬಸ್ ಮೂಲಕ ಬೆಟ್ಟತ್ತೂರಿನ ತನ್ನ ಮನೆ ಸಮೀಪ ಇಳಿದು ನಡೆದುಕೊಂಡು ಹೋಗುವ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದ ಬಾಲಕಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯ ಮಾಹಿತಿ ತಿಳಿದು ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಮೃತದೇಹವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಈ ದುರ್ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಟ್ಟತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿರುವುದರಿಂದ ಹಲವು ಬಾರಿ ದೂರು ನೀಡಿದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ. “ಗ್ರಾಮದ ಬಳಿ ಕಾಡಾನೆಗಳ ಸಂಚಾರ ನಿಯಂತ್ರಿಸಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ನಿರಪರಾಧ ಬಾಲಕಿಯ ಜೀವ ಹೋಗಿರುವುದು ಅತ್ಯಂತ ದುಃಖಕರ,” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ವರದಿ:ಅಶೋಕ್ ಮಡಿಕೇರಿ