ಮಾಳೆಯಂಡ ಅರುಣ್ ಪೂವಯ್ಯ ಅವರಿಗೆ ನಾಲ್ನಾಡ್ ಕೊಡವ ಕೂಟದ ವತಿಯಿಂದ ಸನ್ಮಾನ
ಪೊನ್ನಂಪೇಟೆ, ಆ.4: ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಂಟನ್ ಆಟಗಾರ ಹಾಗೂ ಕೊಡಗಿನ ನೆಲಜಿ ಗ್ರಾಮದ ಮಾಳೆಯಂಡ ಅರುಣ್ ಪೂವಯ್ಯ ಅವರನ್ನು ಕ್ರೀಡಾ ಕ್ಷೇತ್ರದಲ್ಲಿ ಐದು ದಶಕಗಳ ಕಾಲ ಸಲ್ಲಿಸಿದ ವಿಶಿಷ್ಟ ಸೇವೆ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ನೀಡಿದ ಅಪಾರ ಕೊಡುಗೆಗಾಗಿ ನಾಲ್ನಾಡ್ ಕೊಡವ ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಬೆಂಗಳೂರು ಕೊಡವ ಸಮಾಜದಲ್ಲಿ ನಡೆದ ನಾಲ್ನಾಡ್ ಕೊಡವ ಕೂಟದ ವಾರ್ಷಿಕ 'ನಾಲ್ ನಾಡ್ ಓತೊರ್ಮೆ' ಸಮಾರಂಭದಲ್ಲಿ ಮಾಳೆಯಂಡ ಅರುಣ್ ಪೂವಯ್ಯ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ 50 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿರುವ ಅರುಣ್ ಪೂವಯ್ಯ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆಗಳನ್ನು ದಾಖಲಿಸಿದ್ದು, ಕ್ರೀಡಾ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಸೇವೆಗಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಈ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಂದ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಸ್ವೀಕರಿಸಿ ಗೌರವಿಸಲ್ಪಟ್ಟಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಯುವ ಬ್ಯಾಡ್ಮಿಂಟನ್ ಆಟಗಾರರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಮಣವಟ್ಟೀರ ಪಾರ್ವತಿ ಪೆಮ್ಮಯ್ಯ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯ ಹಾಕಿ ಆಟಗಾರ ಬಾಳೆಯಡ ಕರುಣ್ ಕಾಳಪ್ಪ, ಮಡಿಕೇರಿ ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಣವಟ್ಟೀರ ಜಯ ಬೆಳ್ಳಿಯಪ್ಪ, ಬೊಳ್ಯಪಂಡ ಬೋಪಯ್ಯ, ನುಚ್ಚಿಮಣಿಯಂಡ ಗಣೇಶ್, ಅರೆಯಡ ಕಿರಣ್ ಗಣಪತಿ, ಕಂಬೆಯಂಡ ನಾಚಪ್ಪ, ನಾಲ್ನಾಡ್ ಕೊಡವ ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
