ನಿಟ್ಟೂರಿನಲ್ಲಿ ಮನೆ ಗೋಡೆ ಕುಸಿದು ವ್ಯಕ್ತಿಗೆ ಗಂಭೀರ ಗಾಯ; ಪರಿಹಾರ ವಿಳಂಬದ ವಿರುದ್ಧ ಕುಟುಂಬದ ಆರೋಪ

Jul 29, 2026 - 18:50
 0  113
ನಿಟ್ಟೂರಿನಲ್ಲಿ ಮನೆ ಗೋಡೆ ಕುಸಿದು ವ್ಯಕ್ತಿಗೆ ಗಂಭೀರ ಗಾಯ; ಪರಿಹಾರ ವಿಳಂಬದ ವಿರುದ್ಧ ಕುಟುಂಬದ ಆರೋಪ

ಪೊನ್ನಂಪೇಟೆ, ಜು. 28: ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಮನೆ ಗೋಡೆ ಹಾಗೂ ಮೇಲ್ಚಾವಣಿ ಕುಸಿದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಕುದನೆಕೊಡಿರ ಮಣಿ ಬೆಳ್ಳಿಯಪ್ಪ ಅವರು ತಮ್ಮ ತಾಯಿ ಭೋಜಮ್ಮ ವಾಸವಿರುವ ಮನೆಯ ಸಮೀಪ ತೆರಳುತ್ತಿದ್ದ ವೇಳೆ ಏಕಾಏಕಿ ಮನೆಯ ಗೋಡೆ ಮತ್ತು ಮೇಲ್ಚಾವಣಿ ಕುಸಿದಿದ್ದು, ಅವಶೇಷಗಳಡಿ ಸಿಲುಕಿದ್ದರು.

 ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಹೊರತೆಗೆದರು. ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದ ಅವರನ್ನು ಮೊದಲು ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಕಳೆದ ವರ್ಷದ ಭಾರಿ ಮಳೆಯಿಂದ ಇದೇ ಮನೆಯ ಒಂದು ಭಾಗ ಕುಸಿದಿದ್ದು, ಕಂದಾಯ ಇಲಾಖೆ ಸ್ಥಳ ಮಹಜರು ನಡೆಸಿತ್ತು. ಆದರೆ ಇದುವರೆಗೆ ಯಾವುದೇ ಪರಿಹಾರ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಮನೆ ಕುಸಿದು ಗಾಯಗೊಂಡಿರುವ ಘಟನೆಗೆ ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ಗಾಯಾಳುವಿನ ಪುತ್ರಿ ಪೂಜಾ ಬೆಳ್ಳಿಯಪ್ಪ ಆರೋಪಿಸಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

 ಈ ವೇಳೆ ಕಳೆದ ವರ್ಷ ಹಾನಿಗೊಳಗಾದ ಮನೆಗೆ ಪರಿಹಾರ ಕಲ್ಪಿಸಲು ನೈಜ ಫಲಾನುಭವಿ ಭೋಜಮ್ಮ ಅವರ ಹೆಸರಿನಲ್ಲಿ ಪ್ರಸ್ತಾವನೆ ಸಲ್ಲಿಸುವ ಬದಲು, ಮಣಿ ಬೆಳ್ಳಿಯಪ್ಪ ಅವರ ಪತ್ನಿ ತಾಯಮ್ಮ ಅವರ ಹೆಸರಿನಲ್ಲಿ ಶಿಫಾರಸು ಮಾಡಲಾಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಈ ಹಿಂದೆ ರಾಜೀವ್ ಗಾಂಧಿ ವಸತಿ ನಿಗಮದಡಿ ತಾಯಮ್ಮ ಅವರಿಗೆ ಮನೆ ನಿರ್ಮಾಣಗೊಂಡಿದ್ದ ಕಾರಣ ತಾಂತ್ರಿಕ ಕಾರಣಗಳಿಂದ ಪರಿಹಾರ ಮಂಜೂರಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ನೈಜ ಫಲಾನುಭವಿ ಹಾಗೂ ವಯೋವೃದ್ಧೆಯಾದ ಭೋಜಮ್ಮ ಅವರ ಹೆಸರಿನಲ್ಲಿ ತಕ್ಷಣ ಅರ್ಜಿ ಸ್ವೀಕರಿಸಿ ಸೂಕ್ತ ಪರಿಹಾರ ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಹಾಗೂ ಕುಟುಂಬದ ಸದಸ್ಯರು ಸರ್ಕಾರವನ್ನು ಆಗ್ರಹಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0