ಮಂಗಳೂರು: ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಜಾಲ ಬಯಲು; ನಾಲ್ವರ ಬಂಧನ

Dec 6, 2025 - 23:29
Dec 6, 2025 - 23:29
 0  831
ಮಂಗಳೂರು: ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಜಾಲ ಬಯಲು; ನಾಲ್ವರ ಬಂಧನ
Photo credit:VB

ಮಂಗಳೂರು, ಡಿ.6: ನಗರದಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಎಂಡಿಎಂಎ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರ ಬಳಿಯಿಂದ ಸುಮಾರು 50 ಲಕ್ಷ ರೂ. ಮೌಲ್ಯದ 517.76 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಬೈಂದೂರು ನಾವುಂದದ ಮುಹಮ್ಮದ್ ಶಿಯಾಬ್ (ಶಿಯಾಬ್), ಉಳ್ಳಾಲ ನರಿಂಗಾನದ ಮುಹಮ್ಮದ್ ನೌಷದ್ (ನೌಷದ್), ಮಂಗಳೂರು ಕಸಬಾ ಬೆಂಗ್ರೆಯ ಇಮ್ರಾನ್ (ಇಂಬ) ಹಾಗೂ ಬಂಟ್ವಾಳ ಬ್ರಹ್ಮರ ಕೊಟ್ಲುವಿನ ನಿಸಾರ್ ಅಹಮ್ಮದ್ (ನಿಸಾರ್) ಗುರುತಿಸಲಾಗಿದೆ.

ಶನಿವಾರ ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವೆನ್ಷನ್ ಹಾಲ್ ಬಳಿಯಲ್ಲಿ ಆರೋಪಿಗಳು ಕಾರೊಂದರಲ್ಲಿ ಮಾದಕ ವಸ್ತು ಮಾರಾಟಕ್ಕೆ ಹೊಂಚು ಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಸಿಬಿ ಘಟಕಕ್ಕೆ ಲಭಿಸಿತು. ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದ ತಂಡ ತಕ್ಷಣ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿತು.

ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ನೀಡಿದ ಮಾಹಿತಿನಂತೆ, ಬಂಧಿತರಿಂದ 517.76 ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸಿದ 10 ಲಕ್ಷ ರೂ. ಮೌಲ್ಯದ ಕಾರು ಹಾಗೂ ಐದು ಮೊಬೈಲ್ ಫೋನ್‌ಗಳು ಪತ್ತೆಯಾಗಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಬೆಂಗಳೂರಿನ ನೈಜೀರಿಯಾದ ಮೂಲದ ವ್ಯಕ್ತಿಯಿಂದ ಮಾದಕ ವಸ್ತು ಖರೀದಿಸಿ, ಮಂಗಳೂರಿನ ಸಾರ್ವಜನಿಕ ಪ್ರದೇಶಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳಲ್ಲಿ ಅಕ್ರಮವಾಗಿ ಪೂರೈಕೆ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ.124/2025, ಎನ್‌ಡಿಪಿಎಸ್ ಕಾಯ್ದೆಯ ಕಲಂ 22(ಸಿ), 21(ಅ) ಮತ್ತು ಬಿಎನ್‌ಎಸ್ ಕಲಂ 3(5) ಅಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 1