ಪ್ರೀತಿಸಿ ಮದುವೆ: ಹಸುಗೂಸು ಸೇರಿ ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಪತಿ ಪರಾರಿ

Jan 5, 2026 - 14:37
 0  1.6k
ಪ್ರೀತಿಸಿ ಮದುವೆ: ಹಸುಗೂಸು ಸೇರಿ ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಪತಿ ಪರಾರಿ
Photo credit: TV09 (ಹರೀಶ್ & ವರಲಕ್ಷ್ಮೀ)

ಬೆಂಗಳೂರು, ಜ.4: ಮೂವರು ಹೆಣ್ಣು ಮಕ್ಕಳು ಜನಿಸಿದ್ದರೆಂಬ ಕಾರಣಕ್ಕೆ ಪತಿಯೊಬ್ಬರು ಪತ್ನಿ ಹಾಗೂ ಮಕ್ಕಳನ್ನು ಕೈಬಿಟ್ಟು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಾರಿಯಾದ ವ್ಯಕ್ತಿ ಹರೀಶ್. ರಾಜಸ್ಥಾನ ಮೂಲದ ಈತ ಬೆಂಗಳೂರಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಸ್ಟಾಫ್ ನರ್ಸ್ ಆಗಿರುವ ವರಲಕ್ಷ್ಮೀ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಹರೀಶ್, ಬಳಿಕ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹ ಜೀವನ ಆರಂಭಿಸಿದ್ದ.

ದಾಂಪತ್ಯ ಜೀವನದ ಆರಂಭದಲ್ಲಿ ಎಲ್ಲವೂ ಸುಗಮವಾಗಿದ್ದರೂ, ಮಕ್ಕಳ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದಂಪತಿಗೆ ಜನಿಸಿದ ಮೊದಲ ಇಬ್ಬರು ಮಕ್ಕಳು ಹೆಣ್ಣು ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದ ಹರೀಶ್, ಮೂರನೇ ಬಾರಿ ಗಂಡು ಮಗು ಜನಿಸುವ ನಿರೀಕ್ಷೆಯಲ್ಲಿದ್ದನು ಎನ್ನಲಾಗಿದೆ. ಆದರೆ, ಇತ್ತೀಚೆಗೆ ವರಲಕ್ಷ್ಮೀ ಮೂರನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ, ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿದ್ದಾನೆ.

ಪ್ರಸ್ತುತ ಒಂದೂವರೆ ತಿಂಗಳ ಹಸುಗೂಸು ಸೇರಿದಂತೆ ಮೂವರು ಮಕ್ಕಳೊಂದಿಗೆ ವರಲಕ್ಷ್ಮೀ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪತಿ ಕೈಕೊಟ್ಟ ನಂತರ ನೀಡಿದ ದೂರಿನಲ್ಲಿ, ಹರೀಶ್ ಮತ್ತೊಬ್ಬ ಮಹಿಳೆಯೊಂದಿಗೆ ವಾಸಿಸುತ್ತಿರುವ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

“ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಸೇರಿದಂತೆ ದಿನನಿತ್ಯದ ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಸುಗೂಸಿನ ಆರೈಕೆಯೂ ಕಷ್ಟಕರವಾಗಿದೆ” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ದೂರು ನೀಡಿದ್ದರೂ, ಇನ್ನೂ ಆರೋಪಿಯನ್ನು ವಿಚಾರಣೆಗೆ ಕರೆಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

-

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 3
Sad Sad 4
Wow Wow 0