ಆನೆಯನ್ನು 2 ದಿನದಲ್ಲಿ ಸೆರೆ ಹಿಡಿಯದಿದ್ದರೆ ಬೃಹತ್ ಪ್ರತಿಭಟನೆ: ಕೆ.ಜಿ. ಬೋಪಯ್ಯ ಎಚ್ಚರಿಕೆ
admincoorgdaily

ಗೋಣಿಕೊಪ್ಪ:ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಆನೆಯನ್ನು ಮುಂದಿನ 2 ದಿನಗಳಲ್ಲಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸದಿದ್ದರೆ ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ನಡೆಸಲಾಗುವುದು ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಗೋಣಿಕೊಪ್ಪದ ವಿರಾಜಪೇಟೆ ಬಿಜೆಪಿ ಮಂಡಲ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆ-ಮಾನವ ಸಂಘರ್ಷ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ನಡೆಯನ್ನು ಖಂಡಿಸಿದರು. ಆನೆ ದಾಳಿ ನಡೆದ ಬಳಿಕ ಜನರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂದರ್ಭ ಅಧಿಕಾರಿಗಳು ತಕ್ಷಣ ಆನೆ ಸೆರೆ ಕಾರ್ಯಾಚರಣೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ 4 ದಿನ ಕಳೆದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು. "ಸಾಮಾನ್ಯ ಜನರ ಪ್ರಾಣದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ವರ್ತನೆಯೂ ವಿಷಾದನೀಯ.
ಇನ್ನು 2 ದಿನಗಳಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಸಿ ಈ ಭಾಗದ ಜನರಲ್ಲಿರುವ ಭಯವನ್ನು ಹೋಗಲಾಡಿಸಬೇಕು. ಇಲ್ಲವಾದಲ್ಲಿ 17ರಂದು ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು" ಎಂದು ಅವರು ತಿಳಿಸಿದರು. ವನ್ಯಜೀವಿ-ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 2023ರಲ್ಲೇ ರಾಜ್ಯ ಸರ್ಕಾರಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಅವಕಾಶ ನೀಡಿದೆ.ಈ ಮೂಲಕ ಸಮಸ್ಯೆ ಉಂಟು ಮಾಡುತ್ತಿರುವ ವನ್ಯಪ್ರಾಣಿಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಹುಲಿ ಸಂರಕ್ಷಿತ ಪ್ರದೇಶಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಬಹುದಾದರೂ, ಜನರ ದೈನಂದಿನ ಬದುಕಿಗೆ ಎದುರಾಗಿರುವ ವನ್ಯಜೀವಿ ಸಂಘರ್ಷದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಜನರ ತಾಳ್ಮೆಯನ್ನು ಪರೀಕ್ಷಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು. ಜನರು ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಸಂದರ್ಭ ಎದುರಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಬೋಪಯ್ಯ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, "ವನ್ಯಜೀವಿಗಳ ಉಪಟಳವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜನರ ಬದುಕಿನ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ದಾಕ್ಷಿಣ್ಯ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕಾಗಿದೆ" ಎಂದರು.
ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ರೈತ ಮೋರ್ಚಾ ಕಾರ್ಯದರ್ಶಿ ಯಮುನಾ ಚಂಗಪ್ಪ, ನಿಕಟಪೂರ್ವ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಕೃಷಿ ಮೋರ್ಚಾ ಅಧ್ಯಕ್ಷ ರಂಜಿ ಪೂಣಚ್ಚ, ಉಪಾಧ್ಯಕ್ಷ ಕಿಲನ್ ಗಣಪತಿ, ಖಜಾಂಜಿ ಸಂಪತ್, ಕಾರ್ಯದರ್ಶಿ ಮೂಕಳೇರ ಕಾವ್ಯ ಮಧು, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್, ಮಂಡಲ ರೈತ ಮೋರ್ಚಾ ಅಧ್ಯಕ್ಷ ಸುಬ್ರಮಣಿ, ಕುಲ್ಲಚಂಡ ಬೋಪಣ್ಣ, ಮುದ್ದಿಯಡ ಮಂಜು, ಕೊಲ್ಲೀರ ಗೋಪಿ ಚಿಣ್ಣಪ್ಪ, ಕಿಶನ್, ಸುದೀರ್, ಮಹೇಶ್, ಚಿಮ್ಮಣ್ಣ, ಮಡಿಕೇರಿ ನಗರ ಸಭಾಧ್ಯಕ್ಷ ಉಮೇಶ್ ಸುಬ್ರಮಣಿ, ಸೋಮವಾರಪೇಟೆ ಪ್ರಧಾನ ಕಾರ್ಯದರ್ಶಿ ದರ್ಶನ್ ಜೋಯಪ್ಪ ಉಪಸ್ಥಿತರಿದ್ದರು.