State News

ಜಮ್ಮಾಮಲೆ, ಸಿ & ಡಿ, ಜಮೀನು ಹಾಗೂ ವನ್ಯ ಜೀವಿ ಸಂಘರ್ಷಗಳ ಕುರಿತು ಅರಣ್ಯ ಸಚಿವರೊಂದಿಗೆ ಸಭೆ

admincoorgdaily

ಜಮ್ಮಾಮಲೆ, ಸಿ & ಡಿ, ಜಮೀನು ಹಾಗೂ ವನ್ಯ ಜೀವಿ ಸಂಘರ್ಷಗಳ ಕುರಿತು ಅರಣ್ಯ ಸಚಿವರೊಂದಿಗೆ ಸಭೆ ಬೆಂಗಳೂರು: ಅರಣ್ಯ ಸಚಿವರಾದ ಈಶ್ವರ ಬಿ ಖಂಡ್ರೆ ಅವರ ಕಛೇರಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ .ಎಸ್ ಭೋಸರಾಜು, ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರುಗಳ ನೇತೃತ್ವದಲ್ಲಿ ಜಮ್ಮಾಮಲೆ, ಸಿ & ಡಿ, ಜಮೀನು ಹಾಗೂ ವನ್ಯ ಜೀವಿ ಸಂಘರ್ಷಗಳ ಕುರಿತು ಅರಣ್ಯ ಸಚಿವರೊಂದಿಗೆ ಸಭೆ ಅಧಿಕಾರಿಗಳ ಸಭೆ ನಡೆಯಿತು.

 ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ. ಎಸ್ ಪೊನ್ನಣ್ಣ ಮಾತನಾಡಿ ಜಮ್ಮಾಮಲೆ ಹಿಡುವಳಿದಾರ ಆಸ್ತಿ ಹಕ್ಕು ರಕ್ಷಣೆ ಮತ್ತು ಅವರಿಗೆ ನ್ಯಾಯ ದೊರಕಬೇಕು ಎಂದು ನ್ಯಾಯಾಲಯಗಳಲ್ಲಿ ಆದೇಶವಾಗಿದೆ. ಈ ಬಗ್ಗೆ ಶ್ರೀಘ್ರವಾಗಿ ಕ್ರಮವಹಿಸಬೇಕೆಂದು ವಿವರಿಸಿದರು. ಸಚಿವರು ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಸಿ & ಡಿ ಲ್ಯಾಂಡ್ ಬಗ್ಗೆ ಜಂಟಿ ಸರ್ವೆ ಮಾಡಿ ಹಿಡುವಳಿದಾರರಿಗೆ ನ್ಯಾಯ ಒದಗಿಸಬೇಕು. ಕೊಡಗು ಜಿಲ್ಲೆಯಲ್ಲಿ ಆನೆಗಳ ಹಾವಳಿಯಿಂದ ಮಾನವನ ಪ್ರಾಣ ಹಾನಿ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟ ಬೇಕು. ಆನೆ ಮತ್ತು ಹುಲಿಯ ನಿರಂತರ ದಾಳಿಯಿಂದ ಕೊಡಗಿನ ರೈತಾಪಿ ಜನರ ಜೀವನ ಹಾನಿ ಉಂಟಾಗುತ್ತಿದೆ, ಜೊತೆಗೆ ಕೃಷಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹುಲಿ ಮತ್ತು ಆನೆಗಳನ್ನು ಸ್ಥಳಾಂತರಿಸಿ ಜೀವ ಹಾನಿ ಉಂಟಾಗುವುದನ್ನು ಅಧಿಕಾರಿಗಳು ಶೀಘ್ರವಾಗಿ ತಡೆಗಟ್ಟಬೇಕೆಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಮಾನ್ಯ ಸಚಿವರು ಪ್ರತಿಕ್ರಿಯಿಸಿ, ಅಧಿಕಾರಿಗಳು ಕೂಡಲೇ ಮಾನವನ ಪ್ರಾಣ ಹಾನಿಯಾಗದಂತ ಕ್ರಮ ವಹಿಸಿ, ಜನರಿಗೆ ಧೈರ್ಯ ತುಂಬ ಬೇಕು. ನಿರಂತರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಅರಿವು ಮೂಡಿಸಲು ಕಾರ್ಯಪ್ರವೃತ್ತರಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಭೆಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಜಮ್ಮಾಮಲೆ ಅಸೋಷಿಯೇಷನ್ ಪದಾಧಿಕಾರಿಗಳ ಉಪಸ್ಥಿತರಿದ್ದರು.