ಪ್ರತಿಕೂಲ ಹವಾಮಾನದಿಂದ ಮೆಸ್ಸಿ ದಿಲ್ಲಿ ಭೇಟಿ ವಿಳಂಬ: ಪ್ರಧಾನಿ ಮೋದಿ ಜತೆ ನಿಗದಿಯಾಗಿದ್ದ ಮಾತುಕತೆ ರದ್ದು

Dec 16, 2025 - 13:32
 0  255
ಪ್ರತಿಕೂಲ ಹವಾಮಾನದಿಂದ ಮೆಸ್ಸಿ ದಿಲ್ಲಿ ಭೇಟಿ ವಿಳಂಬ: ಪ್ರಧಾನಿ ಮೋದಿ ಜತೆ ನಿಗದಿಯಾಗಿದ್ದ ಮಾತುಕತೆ ರದ್ದು

ಹೊಸದಿಲ್ಲಿ: ಪ್ರತಿಕೂಲ ಹವಾಮಾನದ ಕಾರಣ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಅರ್ಜೆಂಟಿನಾದ ಫುಟ್‌ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರ ದಿಲ್ಲಿ ಭೇಟಿ ವಿಳಂಬವಾಯ್ತು. ಇದರ ಪರಿಣಾಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಗದಿಯಾಗಿದ್ದ ಭೇಟಿಯೂ ರದ್ದಾಗಿದೆ.

‘G.O.A.T Tour of India’ ಭಾಗವಾಗಿ ಡಿಸೆಂಬರ್ 13ರಂದು ಕೋಲ್ಕತ್ತ ಹಾಗೂ ಹೈದರಾಬಾದ್, ಡಿಸೆಂಬರ್ 14ರಂದು ಮುಂಬೈಗೆ ಭೇಟಿ ನೀಡಿದ್ದ ಮೆಸ್ಸಿ ಸೋಮವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ ಆಗಮಿಸಬೇಕಾಗಿತ್ತು. ಆದರೆ ಮೋಡ ಮುಸುಕಿದ ವಾತಾವರಣ ಮತ್ತು ಹವಾಮಾನ ಅಡಚಣೆಗಳಿಂದಾಗಿ ಪ್ರಯಾಣವನ್ನು ಮುಂದೂಡಲಾಯ್ತು. 

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ಮಧ್ಯಾಹ್ನ 1.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗವಹಿಸಬೇಕಿತ್ತು. ಅದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ವೇಳಾಪಟ್ಟಿ ನಿಗದಿಯಾಗಿತ್ತು. ಆದರೆ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಈ ಭೇಟಿ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಮೆಸ್ಸಿಯೊಂದಿಗೆ ಅರ್ಜೆಂಟಿನಾದ ರೊಡ್ರಿಗೊ ಡಿ ಪೌಲ್ ಹಾಗೂ ಉರುಗ್ವೆಯ ಸೂಪರ್‌ಸ್ಟಾರ್ ಲೂಯಿಸ್ ಸೂರೆಜ್ ಕೂಡ ಭಾರತ ಪ್ರವಾಸದಲ್ಲಿದ್ದಾರೆ.

ಮುಂಬೈನಲ್ಲಿ ಸಚಿನ್ ಭೇಟಿ:

2022ರ ಫಿಫಾ ವಿಶ್ವಕಪ್ ವಿಜೇತ ಮೆಸ್ಸಿ ಅವರು ಮುಂಬೈನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಫುಟ್‌ಬಾಲ್ ತಾರೆ ಸುನಿಲ್ ಚೆಟ್ರಿ ಹಾಗೂ ಬಾಲಿವುಡ್ ಗಣ್ಯರನ್ನು ಭೇಟಿಯಾಗಿದ್ದರು.

ಡಿ.13ರಂದು ಕೋಲ್ಕತ್ತದಲ್ಲಿ ನಡೆದ ಕಾರ್ಯಕ್ರಮದ ವೇಳೆ ಗದ್ದಲ ಉಂಟಾಗಿ ಸಾಲ್ಟ್ ಲೇಕ್ ಕ್ರೀಡಾಂಗಣ ಅಶಾಂತಗೊಂಡಿತ್ತು. ಆದರೆ ಅದೇ ದಿನ ಸಂಜೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತ್ತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0