ಸಿಂಗಲ್ ನಿರಾಕರಿಸಿದ ಮಿಲ್ಲರ್:ಗೆಲ್ಲುವ ಪಂದ್ಯ ಕೈ ಚೆಲ್ಲಿದ ಡೆಲ್ಲಿ ಕ್ಯಾಪಿಟಲ್ಸ್
ದೆಹಲಿ:ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ 2026 ರ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 211 ರನ್ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನೀಡಿತ್ತಾದರೂ ಅದು ಸಾಧ್ಯವಾಗಲಿಲ್ಲ. ಡೆಲ್ಲಿ ಪರ ರಾಹುಲ್ 92 ರನ್‌ಗಳ ಇನ್ನಿಂಗ್ಸ್ ಹಾಗೂ ಕೊನೆಯಲ್ಲಿ ಡೇವಿಡ್ ಮಿಲ್ಲರ್ 41 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಎಡವಿದರು. ಇದು ಈ ಆವೃತ್ತಿಯಲ್ಲಿ ಡೆಲ್ಲಿ ತಂಡದ ಮೊದಲ ಸೋಲಾದರೆ, ಇತ್ತ ಗುಜರಾತ್ ತಂಡ ಈ ಸೀಸನ್ನಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ.
20ನೇ ಓವರ್ ಥ್ರಿಲ್ಲಿಂಗ್;20ನೇ ಓವರ್ ಎಸೆದ ಪ್ರಸಿದ್ಧ್ ಕೃಷ್ಣ ಅವರ ಮೊದಲ ಎಸೆತವನ್ನು ವಿಪ್ರಾಜ್ ಬೌಂಡರಿಗಟ್ಟಿದರು. ಆದರೆ ಮುಂದಿನ ಎಸೆತದಲ್ಲಿಯೇ ವಿಪ್ರಜ್ ನಿಗಮ್ ಔಟಾದರು. ನಂತರ ಬಂದ ಕುಲ್ದೀಪ್ ಯಾದವ್ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಸ್ಟ್ರೈಕ್‌ಗೆ ಬಂದ ಮಿಲ್ಲರ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
ಹೀಗಾಗಿ ದೆಹಲಿ ಗೆಲುವಿಗೆ ಎರಡು ರನ್‌ಗಳ ಅಗತ್ಯವಿತ್ತು. ಐದನೇ ಎಸೆತದಲ್ಲಿ ಮಿಲ್ಲರ್ ಬಿಗ್ ಶಾಟ್ ಹೊಡೆಯಲು ಯತ್ನಿಸಿದರು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಇಲ್ಲಿ ಸಿಂಗಲ್ ತೆಗೆದುಕೊಳ್ಳುವ ಅವಕಾಶವಿತ್ತು, ಆದರೆ ಮಿಲ್ಲರ್ ಸಿಂಗಲ್ ನಿರಾಕರಿಸಿದರು.
ಒಂದು ವೇಳೆ ಮಿಲ್ಲರ್ ಸಿಂಗಲ್ ತೆಗೆದುಕೊಂಡಿದ್ದರೆ, ಪಂದ್ಯ ಟೈ ಆಗುತ್ತಿತ್ತು. ಇದರಿಂದ ಫಲಿತಾಂಶ ನಿರ್ಣಹಿಸಲು ಸೂಪರ್ ಓವರ್ ಆಡಬೇಕಿತ್ತು. ಆದರೆ ಮಿಲ್ಲರ್ ಸಿಂಗಲ್ ನಿರಾಕರಿಸಿದ್ದು, ಡೆಲ್ಲಿ ಸೋಲಿಗೆ ಪ್ರಮುಖ ಕಾರಣವಾಯಿತು. ಉಳಿದಂತೆ ಆರನೇ ಎಸೆತದಲ್ಲಿ ಮಿಲ್ಲರ್ಗೆ ರನ್ ಗಳಿಸಲು ಆಗಲಿಲ್ಲ. ಚೆಂಡು ನೇರವಾಗಿ ಕೀಪರ್ ಕೈಗೆ ಹೋಯಿತು. ಕೀಪರ್ ಬಟ್ಲರ್ ಚೆಂಡನ್ನು ಹಿಡಿದು ವಿಕೆಟ್ಗೆ ಹೊಡದರು, ಇತ್ತ ನಾನ್ ಸ್ಟ್ರೈಕ್‌ನಲ್ಲಿದ್ದ ಕುಲ್ದೀಪ್ ಯಾದವ್ ತಮ್ಮ ಅಜಾಗರೂಕತೆಯಿಂದ ರನೌಟ್ ಆದರು. ಇದರಿಂದಾಗಿ ಗುಜರಾತ್ ಒಂದು ರನ್‌ನಿಂದ ಪಂದ್ಯವನ್ನು ಗೆದ್ದುಕೊಂಡಿತು.