National News

ಸಚಿವೆ ನಿರ್ಮಲಾ ಸೀತಾರಾಮನ್‌ಗೂ ಡೀಪ್‌ಫೇಕ್ ಕಾಟ; ಬೆಂಗಳೂರಿನಲ್ಲಿ ಪ್ರಕರಣ ದಾಖಲು

admincoorgdaily

Photo credit: TV09 (ಫೋಟೋ: ನಿರ್ಮಲಾ‌ ಸೀತಾರಾಮನ್)

ಬೆಂಗಳೂರು, ಡಿ.4: ಡೀಪ್‌ಫೇಕ್ ಮತ್ತೆ ತಲೆಯೆತ್ತಿದ್ದು, ಈ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಟಾರ್ಗೆಟ್ ಆಗಿದ್ದಾರೆ. ಹಣಕಾಸು ಹೂಡಿಕೆ ಕುರಿತಂತೆ ಮಾತನಾಡಿದಂತೆ ತೋರಿಸುವ ನಕಲಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಲ್ಲೇಶ್ವರಂ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ರಮೇಶ್ ಎಸ್. ಅವರು ಸಲ್ಲಿಸಿದ ದೂರು ಪ್ರಕಾರ, ಸಚಿವೆಯ ನಿಜವಾದ ವೀಡಿಯೊವನ್ನು ಎಡಿಟ್ ಮಾಡಿ ಡೀಪ್‌ಫೇಕ್ ರೂಪಾಂತರಗೊಳಿಸಿ ಫೇಸ್‌ಬುಕ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಹಂಚಲಾಗಿದೆ. ಹೂಡಿಕೆ ಯೋಜನೆಗಳನ್ನು ಪ್ರಚೋದಿಸುವ ರೀತಿಯಲ್ಲಿ ತಿರುಚಲ್ಪಟ್ಟ ಈ ವೀಡಿಯೊ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವುದರ ಜೊತೆಗೆ, ಆರ್ಥಿಕ ನಷ್ಟದ ಸಾಧ್ಯತೆಯೂ ಇದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಈ ನಕಲಿ ವೀಡಿಯೊ ಹಂಚಿದವರನ್ನು ಗುರುತಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಡೀಪ್‌ಫೇಕ್ ತಂತ್ರಜ್ಞಾನ ದುರುಪಯೋಗದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಇತ್ತೀಚಿನ ಕಾಲದಲ್ಲಿ ಡೀಪ್‌ಫೇಕ್ ಪ್ರಕರಣಗಳು ಹೆಚ್ಚುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಗಾರ್ಬಾ ನೃತ್ಯ ಮಾಡುತ್ತಿರುವ ನಕಲಿ ವೀಡಿಯೊ ಕೂಡ ಕೆಲಕಾಲ ಹಿಂದೆ ವೈರಲ್ ಆಗಿ ವಿವಾದಕ್ಕೀಡಾಗಿತ್ತು. ಇಟಲಿ ಅಧ್ಯಕ್ಷರೊಂದಿಗೆ ಇರುವ ನಕಲಿ ದೃಶ್ಯಗಳೂ ಚರ್ಚೆಗೆ ಕಾರಣವಾಗಿದ್ದವು. ತಂತ್ರಜ್ಞಾನ ಜವಾಬ್ದಾರಿಯುತ ಬಳಕೆ ಬಗ್ಗೆ ಪ್ರಧಾನಿ ಕೂಡ ಮನವಿ ನೀಡಿದ್ದರು.

2023ರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೊ ವೈರಲ್ ಆಗಿ, ದೇಶದಾದ್ಯಂತ ಆತಂಕ ಮೂಡಿಸಿತ್ತು. ಈಗ ಹಣಕಾಸು ಸಚಿವೆ ಅವರು ಹೇಳಿದಂತೆ ಇರುವ ವಿಡಿಯೋ, ಡೀಪ್‌ಫೇಕ್ ದಂಧೆ ನಿಯಂತ್ರಣ ತುರ್ತು ಅಗತ್ಯವಿದೆ ಎನ್ನುವುದನ್ನು ಮತ್ತೆ ಒತ್ತಿಹೇಳುತ್ತಿದೆ.