ಗೋಶಾಲೆಗೆ ಸಚಿವ ಪಿ.ಎಂ ನರೇಂದ್ರ ಸ್ವಾಮಿ ಭೇಟಿ
admincoorgdaily

ಮಡಿಕೇರಿ:ನಗರದ ಕೆ.ನಿಡುಗಣೆ ಗ್ರಾಮದ ಸರ್ಕಾರಿ ಗೋಶಾಲೆಗೆ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಭೇಟಿ ನೀಡಿ ಮಾಹಿತಿ ಪಡೆದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ ಅವರು ಮಾಹಿತಿ ನೀಡಿ ಪ್ರಸ್ತುತ ಗೋಶಾಲೆಯಲ್ಲಿ 35 ಜಾನುವಾರುಗಳಿದ್ದು, ಜಾನುವಾರುಗಳ ಮೇವಿಗಾಗಿ ಭತ್ತದ ಒಣ ಹುಲ್ಲನ್ನು ಖರೀದಿಸಲು ಪ್ರತೀ ವರ್ಷ ಇ-ಟೆಂಡರ್ ಕರೆದು ಬೇಡಿಕೆಗೆ ಅನುಗುಣವಾಗಿ ಖರೀದಿಸಿ ಶೇಖರಣೆ ಮಾಡಲಾಗುತ್ತಿದೆ ಎಂದರು. ಸರ್ಕಾರಿ ಗೋಶಾಲೆ ಮಡಿಕೇರಿಗೆ 8 ಎಕರೆ ಜಾಗ ಮಂಜೂರಾಗಿದ್ದು, ಇದರಲ್ಲಿ 2 ಎಕರೆ ಜಾಗಕ್ಕೆ ಮಾತ್ರ ಬೇಲಿ ನಿರ್ಮಿಸಲಾಗಿದೆ. ಹೆಚ್ಚುವರಿ ಜಾನುವಾರು ಕೊಠಡಿ ನಿರ್ಮಾಣಕ್ಕಾಗಿ ಮತ್ತು ಹೆಚ್ಚುವರಿ ಮೇವು ದಾಸ್ತಾನು ಕೊಠಡಿ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಗೋಶಾಲೆಯ ಅವರಣದಲ್ಲಿ ಇನ್ನೂ ಹೆಚ್ಚಿನ ಹಸಿರು ಮೇವು ಬೆಳೆಯಲು 2 ಎಕರೆ ಜಾಗಕ್ಕೆ ತಂತಿ ಬೇಲಿಯ ಅವಶ್ಯಕತೆ ಇದ್ದು, ಜಾನುವಾರುಗಳಿಗೆ ಜಿಲ್ಲೆಯಲ್ಲಿ ಪ್ರಸ್ತುತ 53 ವಾರಗಳಿಗೆ ಆಗುವಷ್ಟು ಮೇವು ಲಭ್ಯತೆ ಇದೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಲಿಂಗರಾಜ ದೊಡ್ಡಮನಿ ಅವರು ಮಾಹಿತಿ ನೀಡಿದರು.
ಬಳಿಕ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಸರ್ಕಾರಿ ಗೋಶಾಲೆಯ ಅಚ್ಚುಕಟ್ಟು ನಿರ್ವಹಣೆ, ಶುಚಿತ್ವ, ಜಾನುವಾರುಗಳ ಪಾಲನೆ ಪೋಷಣೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ತಹಶೀಲ್ದಾರರಾದ ಶ್ರೀಧರ, ಇತರರು ಇದ್ದರು.