ಭಾಗಮಂಡಲ ಭಗಂಡೇಶ್ವರ ಹಾಗೂ ಪವಿತ್ರಕ್ಷೇತ್ರ ತಲಕಾವೇರಿಗೆ ಸಚಿವರ ಭೇಟಿ, ವಿಶೇಷ ಪೂಜೆ

Aug 6, 2026 - 18:04
 0  76
ಭಾಗಮಂಡಲ ಭಗಂಡೇಶ್ವರ ಹಾಗೂ ಪವಿತ್ರಕ್ಷೇತ್ರ ತಲಕಾವೇರಿಗೆ ಸಚಿವರ ಭೇಟಿ, ವಿಶೇಷ ಪೂಜೆ

ಮಡಿಕೇರಿ: ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಪುಣ್ಯಕ್ಷೇತ್ರ ಭಾಗಮಂಡಲ ಭಗಂಡೇಶ್ವರ ದೇವಾಲಯ ಹಾಗೂ ‘ಕಾವೇರಿ ನದಿ’ ಉಗಮ ಸ್ಥಾನ ತಲಕಾವೇರಿ ಪವಿತ್ರ ಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

 ಮೊದಲಿಗೆ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ ಸಚಿವರು, ನಂತರ ಭಗಂಡೇಶ್ವರ ದೇವಾಲಯದಲ್ಲಿ ಹೆಚ್ಚಿನ ಮಳೆ ಬೆಳೆಯಾಗಿ ನಾಡಿನ ಜನತೆಗೆ ಸಮೃದ್ಧಿ ತರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮಹಾಗಣಪತಿ, ಶ್ರೀ ಮಹಾವಿಷ್ಣು, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿದರು.

 ಬಳಿಕ ತಲಕಾವೇರಿಗೆ ತೆರಳಿ ಶ್ರೀ ಮಹಾ ಗಣಪತಿಗೆ ಪೂಜೆ ಸಲ್ಲಿಸಿ ನಂತರ ತಲಕಾವೇರಿಯಲ್ಲಿ ತಾಯಿ ಕಾವೇರಿ ಮಾತೆಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿ ಕುಂಕುಮಾರ್ಚನೆ ನೆರವೇರಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ನಾಡಿಗೆ ಜೀವಜಲ ನೀಡುವ ಪುಣ್ಯತಾಯಿ ಕಾವೇರಿ ಮಾತೆ ಸಕಲ ಜೀವಿಗಳಿಗೂ ಕುಡಿಯುವ ನೀರನ್ನು ಒದಗಿಸುತ್ತಿದ್ದು, ಕಾವೇರಿ ಕಣಿವೆ ಪಾತ್ರದಲ್ಲಿ ಹೆಚ್ಚಿನ ಮಳೆಯಾಗಿ ಎಲ್ಲರಿಗೂ ಸಮೃದ್ಧಿ ತರುವಂತಾಗಲಿ ಎಂದರು. ಕಾವೇರಿ ಕಣಿವೆ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಇಡೀ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ಕುಡಿಯುವ ನೀರು ಮತ್ತು ಬೆಳೆಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಕಾವೇರಿ ಕಣಿವೆ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗುವಂತಾಗಲಿ ಎಂದು ತಾಯಿ ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಲಾಗಿದೆ ಎಂದರು.

ಈ ಬಾರಿ ಮುಂಗಾರು ತಡವಾಗಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗಿ ನಾಡಿನ ಜನತೆಗೆ ಸುಭಿಕ್ಷೆ ತರುವಂತಾಗಲಿ ಎಂದರು. ಕಳೆದ 15 ದಿನಗಳಿಂದ ರಾಜ್ಯದ ಕಾವೇರಿ ನದಿ ಪಾತ್ರ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆ ನಿಟ್ಟಿನಲ್ಲಿ ಮತ್ತಷ್ಟು ಮಳೆಯಾಗಲಿ ಎಂದು ಸಚಿವರು ಹೇಳಿದರು.

 ಜಿಲ್ಲೆಯಲ್ಲಿ ಮಳೆ-ಬೆಳೆ, ಜಲಾಶಯಗಳ ಸ್ಥಿತಿಗತಿ ಅವಲೋಕಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಕನ್ನಂಬಾಡಿ ಕಟ್ಟೆ 105 ಅಡಿ ಭರ್ತಿಯಾಗಿದ್ದು, ಇನ್ನೂ 19 ಅಡಿ ನೀರು ತುಂಬಲು ಬಾಕಿ ಇದೆ. ಆ ನಿಟ್ಟಿನಲ್ಲಿ ಕಾವೇರಿ ಮಾತೆ ಕೃಪೆ ತೋರಿದಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ ಎಂದು ಸಚಿವರು ನುಡಿದರು.

ಮಂಡ್ಯ ಜಿಲ್ಲೆಯವನಾಗಿ ತಾಯಿ ಕಾವೇರಿ ಮಾತೆಗೆ ಹೆಚ್ಚಿನ ಮಳೆ, ಬೆಳೆಗಾಗಿ ಮೊದಲ ಪೂಜೆ ಸಲ್ಲಿಸುತ್ತೇನೆ ಎಂದು ಸಚಿವರಾದ ನರೇಂದ್ರ ಸ್ವಾಮಿ ಅವರು ತಿಳಿಸಿದರು. ಬಳಿಕ ಮಂಗಳೂರು ರಸ್ತೆಯ ಮದೆನಾಡು ಬಳಿಯ ಕರ್ತೋಜಿ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಅಲ್ಲಿನ ಮಣ್ಣು ಕುಸಿತ ಬಗ್ಗೆ ಎಂಜಿನಿಯರ್‍ಗಳಿಂದ ಮಾಹಿತಿ ಪಡೆದರು.

 ತಲಕಾವೇರಿ ಭಾಗಮಂಡಲ ದೇವಾಲಯದ ತಕ್ಕಮುಖ್ಯಸ್ಥರಾದ ಕೋಡಿ ಮೋಟಯ್ಯ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ತಹಶೀಲ್ದಾರರಾದ ಶ್ರೀಧರ, ದೇವಾಲಯದ ಇಒ ಚಂದ್ರಶೇಖರ್ ಇತರರು ಇದ್ದರು.

 ಇದಕ್ಕೂ ಮೊದಲು ನಗರದ ಪ್ರಸಿದ್ಧ ದೇವಾಲಯ ಓಂಕಾರೇಶ್ವರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಚಿವರು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ಪ್ರಮುಖರಾದ ಪ್ರಕಾಶ್ ಆಚಾರ್ಯ ಇತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0