Kodagu

ನಾಪತ್ತೆಯಾಗಿದ್ದ ವ್ಯಕ್ತಿ, ತೋಟದ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆ

admincoorgdaily

ನಾಪತ್ತೆಯಾಗಿದ್ದ ವ್ಯಕ್ತಿ, ತೋಟದ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆ

ವೀರಾಜಪೇಟೆ : ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ತೋಟದ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ಪರಂಬು ಪೈಸಾರಿಯಲ್ಲಿ ನಡೆದಿದೆ.

ಮೃತರನ್ನು ಪರಂಬು ಪೈಸಾರಿ ನಿವಾಸಿ ದಿವಂಗತ ವೈ. ಮೇದು ಅವರ ಪುತ್ರ ವೈ.ಎಂ. ಉಮೇಶ್ (44) ಎಂದು ಗುರುತಿಸಲಾಗಿದೆ. ತೋಟದ ಕಾರ್ಮಿಕರಾಗಿದ್ದ ಉಮೇಶ್ ಅವರ ಪತ್ನಿ ಸುಮಾರು 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ಪುತ್ರ ನಿರಂಜನ್ ಅವರೊಂದಿಗೆ ವಾಸಿಸುತ್ತಿದ್ದರು. ತಾ. 17ರಂದು ರಾತ್ರಿ ಪುತ್ರನೊಂದಿಗೆ ಊಟ ಮಾಡಿ ಮಲಗಿದ್ದ ಉಮೇಶ್, ಮರುದಿನ ಬೆಳಗ್ಗೆ ಪುತ್ರ ಎಚ್ಚರಗೊಳ್ಳುವ ಮುನ್ನ ಮನೆಯಿಂದ ಹೊರಹೋಗಿದ್ದರು. ಬಳಿಕ ಕುಟುಂಬಸ್ಥರು ಹಾಗೂ ಸ್ಥಳೀಯರು ತಾ. 18ರ ರಾತ್ರಿ ವರೆಗೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮೃತರ ಸಂಬಂಧಿ ಜೂಬಿ ಅವರು ತಾ. 19ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಉಮೇಶ್ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಇಂದು ಮುಂಜಾನೆ ಪರಂಬು ಪೈಸಾರಿ ನಿವಾಸಿ ಪ್ರಕಾಶ್ ಅವರ ತೋಟದ ತೆರೆದ ಬಾವಿಯಲ್ಲಿ ಉಮೇಶ್ ಅವರ ಶವ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಜರು ನಡೆಸಿ, ಮೃತದೇಹವನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವರದಿ:ಕಿಶೋರ್ ಕುಮಾರ್ ಶೆಟ್ಟಿ