ಲಿವ್ ಇನ್ ಸಂಗಾತಿ ಜೊತೆ ಐಷಾರಾಮಿ ಜೀವನ ಚಟಕ್ಕೆ ಮೊಬೈಲ್ ಕಳ್ಳತನ; ವರ್ತೂರು ಪೊಲೀಸರಿಂದ ಮೂವರ ಬಂಧನ

Oct 29, 2025 - 13:59
 0  1k
ಲಿವ್ ಇನ್ ಸಂಗಾತಿ ಜೊತೆ ಐಷಾರಾಮಿ ಜೀವನ ಚಟಕ್ಕೆ ಮೊಬೈಲ್ ಕಳ್ಳತನ; ವರ್ತೂರು ಪೊಲೀಸರಿಂದ ಮೂವರ ಬಂಧನ
Photo credit: Etv bharath

ಬೆಂಗಳೂರು: ಐಷಾರಾಮಿ ಜೀವನ ನಡೆಸಲು ದುಬಾರಿ ಮೊಬೈಲ್‌ಗಳನ್ನು ಕದಿಯುತ್ತಿದ್ದ ಮೂವರು ಆರೋಪಿಗಳನ್ನು ವರ್ತೂರು ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಬಂಧಿತರನ್ನು ಸಿಕ್ಕಿಂ ಮೂಲದ ದಿವಾಸ್ ಕಮಿ (22), ಆರೋಹನ್ ಥಾಪಾ (28) ಹಾಗೂ ನೇಪಾಳ ಮೂಲದ ಆಸ್ಮಿತಾ (24) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 40 ಲಕ್ಷ ರೂ. ಮೌಲ್ಯದ 39 ಮೊಬೈಲ್‌ ಫೋನ್‌ಗಳು, ಒಂದು ಡಿಜಿಟಲ್ ವಾಚ್ ಮತ್ತು ಕ್ಯಾಮೆರಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಯನ್ನು ಬಿಟ್ಟು ಬೆಂಗಳೂರಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಆಸ್ಮಿತಾ, ದಿವಾಸ್ ಕಮಿಯೊಂದಿಗೆ ಲಿವ್ ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು. ದಿವಾಸ್ ಕಮಿ ಮತ್ತು ಅವನ ಸ್ನೇಹಿತ ಆರೋಹನ್ ಥಾಪಾ ಇಬ್ಬರೂ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ಆಸ್ಮಿತಾಳೊಂದಿಗೆ ಐಷಾರಾಮಿ ಜೀವನ ನಡೆಸಲು ಇಬ್ಬರೂ ದುಬಾರಿ ಮೊಬೈಲ್‌ಗಳನ್ನು ಕದಿಯುತ್ತಿದ್ದರು. ಬಳಿಕ ಅವುಗಳನ್ನು ಆಸ್ಮಿತಾಳ ಮೂಲಕ ಮಾರಾಟ ಮಾಡಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಇತ್ತೀಚೆಗೆ ಬೆಳ್ಳಂದೂರು ಮತ್ತು ವರ್ತೂರು ಠಾಣಾ ವ್ಯಾಪ್ತಿಯಲ್ಲಿರುವ ಎರಡು ಶೋ ರೂಮ್‌ಗಳ ಶಟರ್ ಬೀಗ ಮುರಿದು ಒಳನುಗ್ಗಿ ಮೊಬೈಲ್‌ಗಳನ್ನು ಕಳ್ಳತನ ಮಾಡಿ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಪರಾರಿಯಾಗಿದ್ದರು.

ದಿವಾಸ್ ಕಮಿಯ ವಿರುದ್ಧ ಸಿಕ್ಕಿಂನಲ್ಲಿ ಮಾದಕ ದ್ರವ್ಯ ಪ್ರಕರಣ ಹಾಗೂ ವೈಟ್‌ಫೀಲ್ಡ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಆರೋಹನ್ ಥಾಪಾ ವಿರುದ್ಧವೂ ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣವಿದ್ದು, ಇಬ್ಬರೂ ಬೆಳ್ಳಂದೂರು ವ್ಯಾಪ್ತಿಯಲ್ಲಿ 22 ಹಾಗೂ ವರ್ತೂರು ವ್ಯಾಪ್ತಿಯಲ್ಲಿ 14 ಮೊಬೈಲ್‌ಗಳನ್ನು ಕಳ್ಳತನ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ.

ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಖರೀದಿಸಿದ್ದ ಚಿನ್ನಾಭರಣವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಕೆ. ಪರಶುರಾಮ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0