ಮುಂಗಾರು; ರಸಗೊಬ್ಬರ ಸಮರ್ಪಕ ಪೂರೈಕೆಗೆ ಜಿಲ್ಲಾಧಿಕಾರಿ ಸೋಮಶೇಖರ್ ಸೂಚನೆ

Apr 14, 2026 - 10:29
 0  74
ಮುಂಗಾರು; ರಸಗೊಬ್ಬರ ಸಮರ್ಪಕ ಪೂರೈಕೆಗೆ ಜಿಲ್ಲಾಧಿಕಾರಿ ಸೋಮಶೇಖರ್ ಸೂಚನೆ

ಮಡಿಕೇರಿ ಏ.13:-ಜೂನ್ ತಿಂಗಳಿನಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ. 

ರಸಗೊಬ್ಬರ ಪೂರೈಕೆದಾರರು ಹಾಗೂ ವಿತರಕರೊಂದಿಗೆ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ರಸಗೊಬ್ಬರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ ಮತ್ತು ಎಂಒಪಿ ರಸಗೊಬ್ಬರಕ್ಕೆ ಬೇಡಿಕೆ ಇದೆ. ಆ ನಿಟ್ಟಿನಲ್ಲಿ ಬೇಡಿಕೆಗೆ ತಕ್ಕಂತೆ ದಾಸ್ತಾನು ಮಾಡಿಕೊಳ್ಳಬೇಕು. ಜೊತೆಗೆ ಮಣ್ಣು ಆರೋಗ್ಯ ನೋಡಿಕೊಂಡು ರಸಗೊಬ್ಬರ ಬಳಸುವಂತಾಗಲು ರೈತರಿಗೆ ಮನವರಿಕೆ ಮಾಡುವಂತಾಗಬೇಕು ಹಾಗೂ ಅಧಿಕಾರಿಗಳು, ಮಾರಾಟಗಾರರು ಮತ್ತು ವಿತರಕರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ, ಸಾಂಬಾರ ಮಂಡಳಿಯವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೃಷಿಕರು ಯಾವ ಯಾವ ರೀತಿಯ ರಸಗೊಬ್ಬರ ಬಳಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಅವರು ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಬಿ.ಎಸ್.ಚಂದ್ರಶೇಖರ್ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಯೂರಿಯಾ, ಡಿಎಪಿ, ಎಂಒಪಿ, ಎನ್‍ಪಿಕೆ, ಕಾಂಪ್ಲೆಕ್ಸ್, ಎಸ್‍ಪಿ ರಸಗೊಬ್ಬರ ದಾಸ್ತಾನು ಬಗ್ಗೆ ಮಾಹಿತಿ ನೀಡಿದರು. 

ಕೃಷಿಕರಿಗೆ ನಕಲಿ ಹಾಗೂ ಅಸಲಿ ರಸಗೊಬ್ಬರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಮಾರಾಟಗಾರರು, ವಿತರಕರು ರೈತರಿಗೆ ಮೋಸವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ಕೊಡಗು ಜಿಲ್ಲೆಯಲ್ಲಿ ಮುಂಗಾರು ಶೀಘ್ರ ಆರಂಭವಾಗುವುದರಿಂದ ಯೂರಿಯಾಗೆ ಬೇಡಿಕೆ ಇದೆ ಎಂದರು. ರಸಗೊಬ್ಬರ ಪೂರೈಕೆದಾರರು ಮತ್ತು ಮಾರಾಟಗಾರರು ಸಭೆಯಲ್ಲಿ ಹಲವು ಸಲಹೆ ನೀಡಿದರು.

ಕೃಷಿ ಇಲಾಖೆ ಉಪ ನಿರ್ದೇಶಕರಾದ ಡಾ.ಡಿ.ಎಸ್.ಸೋಮಶೇಖರ್, ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರಾದ(ಜಾರಿ ದಳ) ಪರಮೇಶ್, ಸೋಮವಾರಪೇಟೆ ಸಹಾಯಕ ಕೃಷಿ ನಿರ್ದೇಶಕರಾದ ಕೆ.ಪಿ.ವೀರಣ್ಣ, ಮಡಿಕೇರಿ ತಾಂತ್ರಿಕ ಅಧಿಕಾರಿ ಎಂ.ವಿ.ವರದರಾಜು, ರಸಗೊಬ್ಬರ ಕಂಪನಿ ಸರಬರಾಜು ದಾರರು ಹಾಗೂ ರಸಗೊಬ್ಬರ ಮಾರಾಟಗಾರರು, ವಿತರಕರು ಇತರರು ಇದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0