ಸಂಸ್ಕಾರದ ಶಿಕ್ಷಣ ಇಂದಿನ ಅಗತ್ಯ: ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್; ಜ್ಞಾನಗಂಗಾ ಶಾಲೆಯ ಮಕ್ಕಳ ಕಾರ್ಯಕ್ರಮದಲ್ಲಿ ಪೋಷಕರಿಗೆ ಕರೆ

Feb 21, 2026 - 16:55
 0  236
ಸಂಸ್ಕಾರದ ಶಿಕ್ಷಣ ಇಂದಿನ ಅಗತ್ಯ: ವೃತ್ತ ನಿರೀಕ್ಷಕ  ಪ್ರದೀಪ್ ಕುಮಾರ್;   ಜ್ಞಾನಗಂಗಾ ಶಾಲೆಯ ಮಕ್ಕಳ ಕಾರ್ಯಕ್ರಮದಲ್ಲಿ ಪೋಷಕರಿಗೆ ಕರೆ

ಕುಶಾಲನಗರ : ಸಮಾಜದಲ್ಲಿ ಇಂದು ವಿದ್ಯಾವಂತರಿಂದಲೇ ಹೆಚ್ಚಿನ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದರಿಂದ ಇಂದಿನ ಎಳೆಯ ಮಕ್ಕಳಿಗೆ ಸಂಸ್ಕಾರ ತುಂಬಿದ ಶಿಕ್ಷಣ ಅತಿ ಅಗತ್ಯವಿದೆ ಎಂದು ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಕರೆಕೊಟ್ಟರು.

ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯುಕೆಜಿ ಮಕ್ಕಳ ಗ್ರಾಜುಯೇಷನ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,

 ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಇಂದು ಉತ್ತಮ ಸಂಸ್ಕಾರ ನೀಡಿದರೆ ವೃದ್ದಾಪ್ಯದಲ್ಲಿ ಪ್ರಯೋಜನಕ್ಕೆ ಬರುತ್ತದೆ. ಏಕೆಂದರೆ ಸಮಾಜದಲ್ಲಿ ಇಂದು ನಡೆಯುತ್ತಿರುವ ಎಲ್ಲಾ ದುಷ್ಕ್ರತ್ಯಗಳಿಗೆ, ಅಕ್ರಮ ಅನ್ಯಾಯ ಮೊದಲಾದ ಸಮಾಜ ಬಾಹಿರ ಕೃತ್ಯಗಳು ವಿದ್ಯಾವಂತರಿಂದಲೇ ನಡೆಯುತ್ತಿರುವುದರಿಂದ ಪೋಷಕರು ಇಂದಿನಿಂದಲೇ ಎಚ್ಚೆತ್ತುಕೊಳ್ಳುವ ಮೂಲಕ ಭವಿಷ್ಯದ ಉತ್ತಮ ಸಮಾಜ ನಿರ್ಮಾಣದ ಕುಡಿಗಳನ್ನು ಇಂದಿನಿಂದಲೇ ತಯಾರಿಗೊಳಿಸಬೇಕು.

 ಅದು ಮನೆಯಂಗಳದಿಂದ ಹಾಗೂ ಶಾಲಾ ತರಗತಿಗಳಿಂದಲೇ ಆರಂಭ ವಾಗಬೇಕಿದೆ ಎಂದು ಪ್ರದೀಪ್ ಕುಮಾರ್ ಆಶಿಸಿದರು. ಹಿಂದೆಲ್ಲಾ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳು ಮರ ಏರುತ್ತಿದ್ದರು. ಕೆರೆ ತೋಡುಗಳಲ್ಲಿ ಈಜುತ್ತಿದ್ದರು. ಮರ ಹತ್ತಿ ಉಳಿಯುತ್ತಾ ಜೀವನ ಪಾಠವನ್ನು ಕಲಿಯುತ್ತಿದ್ದರು. ಶಾಲೆಗಳಲ್ಲಿ ಅಂದು ಉತ್ತಮವಾದ ನೀತಿಪಾಠಗಳೂ ಇದ್ದವು. ಆದರೆ ಇಂದಿನ ವ್ಯತಿರಿಕ್ತ ಕಾಲಘಟ್ಟದಲ್ಲಿ ಇರುವ ನಾವು ನಮ್ಮ ಪರಿಸರದ ಮೇಲಿನ ಎಲ್ಲಾ ಏರಿಳಿತಗಳನ್ನು ನೋಡುತ್ತಿರುವ ಕಾರಣ ಒಳಿತಿನತ್ತಾ ಮಕ್ಕಳನ್ನು ಒಯ್ಯುವ ಬಗ್ಗೆ ಪೋಲೀಸ್ ಅಧಿಕಾರಿ ಪ್ರದೀಪ್ ಕುಮಾರ್ ಹೇಳಿದರು.

ಜ್ಞಾನ ಗಂಗಾ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಟಿ.ಕೆ.ಸುಧೀರ್ ಮಾತನಾಡಿ, ಎಳೆಯ ಮಕ್ಕಳ ಸರ್ವತೋಮುಖ ಪ್ರಗತಿಯೇ ಜ್ಞಾನಗಂಗಾ ಶಾಲೆಯ ಮಹದುದ್ದೇಶವಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ, ಟ್ರಸ್ಟಿಗಳಾದ ಅನಂತಪದ್ಮನಾಭ, ಶೋಭಾ ಪದ್ಮನಾಭ, ಪ್ರಾಂಶುಪಾಲೆ ಸತ್ಯಸುಲೋಚನಾ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಶಾಲೆಯ ನರ್ಸರಿ ವಿಭಾಗದ ಶಿಕ್ಷಕರಾದ ಮರಿಯಾ, ಸಂಧ್ಯಾ, ಶಾನಿಲಾ, ಪುನೀತ್, ಹರೀಶ್ ಇದ್ದರು. ಇದೇ ಸಂದರ್ಭ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0