ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಪಾಡುವುದು ನನ್ನ ಕರ್ತವ್ಯ: ಸಿಎಂ ಡಿ ಕೆ ಶಿವಕುಮಾರ್

Aug 16, 2026 - 17:52
 0  112
ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಪಾಡುವುದು ನನ್ನ ಕರ್ತವ್ಯ: ಸಿಎಂ ಡಿ ಕೆ ಶಿವಕುಮಾರ್

ಮಡಿಕೇರಿ, ಆ.16: "ರಾಜ್ಯದ ಜಲಾಶಯಗಳು ಇನ್ನೂ ಸಂಪೂರ್ಣವಾಗಿ ತುಂಬಿಲ್ಲ. ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕು. ಎರಡೂ ಬಹಳ ಮುಖ್ಯ. ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಯುವುದು ನನ್ನ ಕರ್ತವ್ಯ" ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.

 ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. "ಕುಡಿಯುವ ನೀರು, ಕೃಷಿಗೆ ಜಲಾಶಯಗಳಲ್ಲಿನ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡೇ ನಾವು ನಿರ್ಧಾರ ಕೈಗೊಳ್ಳಬೇಕು.‌ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಬೇಕು, ರೈತರಿಗೆ ಅನ್ನ ಸಿಗಬೇಕು ಎಂಬುದು ನಮ್ಮ ಆಶಯ" ಎಂದು ತಿಳಿಸಿದರು. "ನಮ್ಮ ರಾಜ್ಯದ ಒಳಗೆ ಯಾವುದೇ ಅಣೆಕಟ್ಟು ಕಟ್ಟಲು ಅಭ್ಯಂತರವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ‌.

ಕೇಂದ್ರ ಸರ್ಕಾರ ಕೂಡ ತಮಿಳುನಾಡಿನ ಸಂಸದರಿಗೆ ಉತ್ತರ ನೀಡುವಾಗಲೂ ಸ್ಪಷ್ಟಪಡಿಸಿದೆ. ಮೇಕೆದಾಟು ನಿರ್ಮಾಣದಿಂದ ತಮಿಳುನಾಡಿಗೆ ನಿಗದಿಯಾಗಿರುವ 177.25 ಟಿಎಂಸಿ ನೀರಿನ ಹಂಚಿಕೆಗೆ ತೊಂದರೆಯಾಗುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆಗೆ ಪ್ರತ್ಯೇಕ ನಿಯಮಗಳಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಈ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ. ನಮ್ಮ ಡ್ಯಾಮ್‌ಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾದರೆ ಅನಗತ್ಯ ಸಂಕಷ್ಟ ಎದುರಾಗಬಹುದು. ಆ ಪರಿಸ್ಥಿತಿ ಬರಬಾರದು. ನಾವು ಕಾನೂನು ಪಾಲಿಸದಿದ್ದರೆ ಅಣೆಕಟ್ಟು ನಿಯಂತ್ರಣವನ್ನ ಕೇಂದ್ರ ಸರ್ಕಾರಕ್ಕೆ ಕೊಡಬೇಕಾದ ಪರಿಸ್ಥಿತಿ ಎದುರಾಗಬಹುದು" ಎಂದರು‌.

"ಕಾವೇರಿ ನದಿಗೆ ಹಾಗೂ ಕನ್ನಂಬಾಡಿ ಕಟ್ಟೆ ಅನ್ನದ ತಟ್ಟೆ. ನಮ್ಮ ರೈತರು ಬೆಳೆ ತೆಗೆಯಲಿ, ಅವರು ಉಳಿಯಲಿ ಎಂದು ತಾಯಿ ಕಾವೇರಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಮೇಕೆದಾಟು ಹೋರಾಟ “ನಮ್ಮ ನೀರು, ನಮ್ಮ ಹಕ್ಕು” ಸಂದರ್ಭದಲ್ಲಿ ಕಾವೇರಿ ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದೆ. ಮೂರು ವರ್ಷಕ್ಕೊಮ್ಮೆ ಇಂತಹ ನೀರಿನ ಸಮಸ್ಯೆ ಎದುರಾಗುವುದು ಪ್ರಕೃತಿಯ ನಿಯಮ" ಎಂದು ಹೇಳಿದರು.

"ರಾಜ್ಯದ ಜನತೆ, ಪಕ್ಷದ ನಾಯಕರು ಹಾಗೂ ಗುರುಗಳ ಆಶೀರ್ವಾದದಿಂದ ಕಳೆದ 45 ವರ್ಷಗಳಿಂದ ನಾನು ನಡೆಸಿದ ಹೋರಾಟಕ್ಕೆ ಫಲ. ಪ್ರಾರ್ಥನೆಗೆ ಫಲ ಸಿಕ್ಕಿದೆ" ಎಂದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಇತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0