ಅಪಹರಣಕ್ಕೊಳಗಾದ 6 ತಿಂಗಳ ಮಗುವನ್ನು ಅರ್ಧ ಗಂಟೆಯಲ್ಲಿ ಪತ್ತೆ ಹಚ್ಚಿದ ಮೈಸೂರಿನ ರೈಲ್ವೆ ಪೊಲೀಸರು!

Oct 23, 2025 - 23:42
 0  1.3k
ಅಪಹರಣಕ್ಕೊಳಗಾದ 6 ತಿಂಗಳ ಮಗುವನ್ನು ಅರ್ಧ ಗಂಟೆಯಲ್ಲಿ ಪತ್ತೆ ಹಚ್ಚಿದ ಮೈಸೂರಿನ ರೈಲ್ವೆ ಪೊಲೀಸರು!
ಫೋಟೋ:ರೈಲ್ವೆ ಪೊಲೀಸ್: photo credit: The Hans India

ಮೈಸೂರು: ನೈಋತ್ಯ ರೈಲ್ವೆ ವ್ಯಾಪ್ತಿಯ ಮೈಸೂರು ರೈಲ್ವೆ ಸುರಕ್ಷತಾ ಪಡೆ (RPF) ಸಿಬ್ಬಂದಿ ತ್ವರಿತ, ಶಿಸ್ತಿನ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯಿಂದ ಕೇವಲ ಅರ್ಧ ಗಂಟೆಯೊಳಗೆ ಅಪಹರಣಕ್ಕೊಳಗಾದ ಆರು ತಿಂಗಳ ಗಂಡು ಮಗುವನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಪೋಷಕರಿಗೆ ಹಸ್ತಾಂತರಿಸಿರುವ ಘಟನೆ ನಡೆದಿದೆ.

ಬೆಳಗಿನ ಸುಮಾರು 5:20ರ ಸುಮಾರಿಗೆ ಮೈಸೂರು ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಮಗು ಕಾಣೆಯಾದ ಬಗ್ಗೆ ಅಳುತ್ತಿದ್ದ ಮಹಿಳೆಯನ್ನು ಆರ್‌ಪಿಎಫ್ ಕಾನ್ಸ್‌ಟೇಬಲ್ ಸಿ.ಎಂ. ನಾಗರಾಜು ಗಮನಿಸಿದರು. ತಕ್ಷಣ ಅವರು ಈ ವಿಷಯವನ್ನು ಎಎಸ್‌ಐ ಹಾಗೂ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಅವರಿಗೆ ತಿಳಿಸಿದ್ದಾರೆ. ಅಧಿಕಾರಿಗಳು ಕೂಡಲೇ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಪ್ರಾರಂಭಿಸಿದರು.

ಪರಿಶೀಲನೆಯ ವೇಳೆ ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಮಗುವನ್ನು ಕೈಯಲ್ಲಿ ಹಿಡಿದು ಪ್ಲಾಟ್‌ಫಾರ್ಮ್ ಸಂಖ್ಯೆ 6ರ ಮೂಲಕ ರೈಲು ಸಂಖ್ಯೆ 16206 ಹತ್ತಲು ಯತ್ನಿಸುತ್ತಿರುವುದು ದೃಶ್ಯಗಳಲ್ಲಿ ಪತ್ತೆಯಾಯಿತು. ತಕ್ಷಣ ಕಾರ್ಯಪ್ರವೃತ್ತವಾದ ಆರ್‌ಪಿಎಫ್ ತಂಡವು ಬೆಳಿಗ್ಗೆ 5:50ರೊಳಗೆ ಆ ಮಹಿಳೆಯನ್ನು ತಡೆದು ಮಗುವನ್ನು ರಕ್ಷಿಸಿ ಪೋಷಕರಿಗೆ ಹಸ್ತಾಂತರಿಸಿತು.

ಆರೋಪಿ ದೇವಿಕಾ (ಹೆಸರು ಬದಲಾಯಿಸಲಾಗಿದೆ), ಹಾಸನ ಜಿಲ್ಲೆಯ ನಿವಾಸಿಯಾಗಿದ್ದು, ಆಕೆಯನ್ನು ಮೈಸೂರು ರೈಲು ಪೊಲೀಸ್ ಠಾಣೆಯ ಜಿಆರ್‌ಪಿ (GRP)ಗೆ ಒಪ್ಪಿಸಲಾಯಿತು. ಬಳಿಕ ಜಿಆರ್‌ಪಿ ಅಧಿಕಾರಿಗಳು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 137(b) ಅಡಿ ಪ್ರಕರಣ (ಅಪರಾಧ ಸಂಖ್ಯೆ 25/2025) ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಶೀಘ್ರ ಕಾರ್ಯಾಚರಣೆ ರೈಲ್ವೆ ಸುರಕ್ಷತಾ ಪಡೆ ಆರಂಭಿಸಿರುವ ‘ಆಪರೇಷನ್ ನನ್ನೆ ಫರಿತ್ತೆ’ ಯೋಜನೆಯ ಯಶಸ್ಸಿಗೆ ಮತ್ತೊಂದು ಪ್ರಬಲ ಸಾಕ್ಷಿಯಾಗಿದೆ. ನಾಪತ್ತೆಯಾದ ಅಥವಾ ಅಪಹರಣಕ್ಕೊಳಗಾದ ಮಕ್ಕಳನ್ನು ಪತ್ತೆಹಚ್ಚಿ ಪೋಷಕರೊಂದಿಗೆ ಪುನಃ ಸೇರಿಸುವ ಉದ್ದೇಶದಿಂದ ಈ ಉಪಕ್ರಮ ಕೈಗೊಳ್ಳಲಾಗಿದೆ.

ಆರ್‌ಪಿಎಫ್ ಅಧಿಕಾರಿಗಳು ಸಿಸಿಟಿವಿ ಕಣ್ಣಾವಲು ಮತ್ತು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ಈ ಕಾರ್ಯಾಚರಣೆಯ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

What's Your Reaction?

Like Like 11
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 2