ಎನ್‍ಡಿಆರ್‍ಎಫ್ ತಂಡ ಭೇಟಿ; ಮಾಡಿ ಮಾಹಿತಿ ಪಡೆದ ಜಿಲ್ಲಾಧಿಕಾರಿ

Jun 9, 2026 - 17:49
 0  146
ಎನ್‍ಡಿಆರ್‍ಎಫ್ ತಂಡ ಭೇಟಿ; ಮಾಡಿ ಮಾಹಿತಿ ಪಡೆದ ಜಿಲ್ಲಾಧಿಕಾರಿ

ಮಡಿಕೇರಿ ಜೂ.09:-ನಗರದ ಜಿಲ್ಲಾ ಸಹಕಾರ ತರಬೇತಿ ಸಂಸ್ಥೆಯ ವಸತಿ ನಿಲಯದಲ್ಲಿ ವ್ಯಾಸ್ತವ್ಯ ಹೂಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ(ಎನ್‍ಡಿಆರ್‍ಎಫ್) ಅಧಿಕಾರಿಗಳು ಹಾಗೂ ಸಿಬ್ಬಂಧಿಯನ್ನು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಂಗಳವಾರ ಭೇಟಿ ಮಾಡಿ ಮಾಹಿತಿ ಪಡೆದರು.   

      ಜಿಲ್ಲೆಯ ಸೂಕ್ಷ್ಮ ಹಾಗೂ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಿ, ತುರ್ತು ಸಂದರ್ಭದಲ್ಲಿ ಜನ-ಜಾನುವಾರು ರಕ್ಷಣೆ ಮಾಡುವಲ್ಲಿ ಎನ್‍ಡಿಆರ್‍ಎಫ್ ತಂಡ ಕರ್ತವ್ಯ ನಿರ್ವಹಿಸಲಿದೆ.  

      ಬೆಂಗಳೂರಿನ ರೀಜನಲ್ ರೆಸ್ಪಾನ್ಸ್ ಸೆಂಟರ್(ಆರ್‍ಆರ್‍ಸಿ) 10ನೇ ಬೆಟಾಲಿಯನ್‍ನ ಇನ್ಸ್‍ಪೆಕ್ಟರ್ ರಾಮ್ ಭಜ್ ಅವರ ನೇತೃತ್ವದಲ್ಲಿ ಎನ್‍ಡಿಆರ್‍ಎಫ್ ತಂಡ ಆಗಮಿಸಿದ್ದು, ಬೋಟ್‍ಗಳು, ಮರ ಕತ್ತರಿಸುವ ಯಂತ್ರ, ರ್ಯಾಪ್ಟ್, ಹಗ್ಗ, ಟೆಂಟ್, ಜೀವರಕ್ಷಕ ಜಾಕೆಟ್, ಸರ್ಚ್ ಲೈಟ್, ಆಕ್ಸಿಜನ್ ಜನರೇಟರ್, ಜೀವರಕ್ಷಕ ಔಷಧಗಳ ಸಿಗ್ನಲ್ ಯೂನಿಟ್‍ಗಳು ಹೀಗೆ ಪರಿಕರಗಳ ಜೊತೆ ಎನ್‍ಡಿಆರ್‍ಎಫ್ ತಂಡ ಒಳಗೊಂಡಿದೆ.

      ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಸಾಧಾರಣ ಮಳೆಯಾಗುತ್ತಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಪ್ರತೀ ವರ್ಷದಂತೆ ಈ ವರ್ಷವೂ ಎನ್‍ಡಿಆರ್‍ಎಫ್ ತಂಡ ಕೊಡಗು ಜಿಲ್ಲೆಗೆ ಆಗಮಿಸಿದ್ದು, ಸೂಕ್ಷ್ಮ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಮಾಹಿತಿ ಪಡೆಯಲಿದೆ. 

       ಈ ಬಾರಿ ಶ್ವಾನವು ಸಹ ಆಗಮಿಸಿದ್ದು, ಹೆಚ್ಚಿನ ಮಳೆಯಿಂದ ಯಾವುದಾದರೂ ಅವಘಡಗಳು ಸಂಭವಿಸಿದಲ್ಲಿ ಪತ್ತೆ ಹಚ್ಚಲು ಶ್ವಾನ ಸಹಾಯಕವಾಗಲಿದೆ. ಈಗಾಗಲೇ ಆಗಮಿಸಿರುವ 10ನೇ ಬೆಟಾಲಿಯನ್ ತಂಡವು ಕೇರಳದ ವಯನಾಡು ಸೇರಿದಂತೆ ಹಲವು ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. 

      ತಂಡದಲ್ಲಿ 30 ಮಂದಿ ಸಿಬ್ಬಂದಿಗಳು ಇದ್ದು, ವಿವಿಧ ರಾಜ್ಯಗಳಿಂದ ಆಗಮಿಸಿದ್ದಾರೆ. ಪ್ರವಾಹ ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ, ಪ್ರಾಕೃತಿಕ ವಿಕೋಪ ಉಂಟಾದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವ ಸಂಬಂಧ ತಂಡ ಸಿದ್ದವಾಗಿದೆ. 

        ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸಹಕಾರ ತರಬೇತಿ ಸಂಸ್ಥೆಯ ವಸತಿ ನಿಲಯದಲ್ಲಿ ಎನ್‍ಡಿಆರ್‍ಎಫ್ ತಂಡ ವಾಸ್ತವ್ಯ ಹೂಡಿದ್ದು, ಹೆಚ್ಚಿನ ಮಳೆಯಿಂದ ಅವಘಡಗಳು ಸಂಭವಿಸಿದಲ್ಲಿ ಎನ್‍ಡಿಆರ್‍ಎಫ್ ತಂಡ ತುರ್ತಾಗಿ ಧಾವಿಸಿ ರಕ್ಷಣಾ ಕಾರ್ಯಚರಣೆ ಕೈಗೊಳ್ಳಲಿದೆ ಎಂದರು.  

        ಸೂಕ್ಷ್ಮ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ. ಹಾಗೆಯೇ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮಳೆಗಾಲದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0