NEET ಪ್ರಶ್ನೆಪತ್ರಿಕೆ ಸೋರಿಕೆ: ಕೇಂದ್ರದ ವಿರುದ್ಧ ಕೊಡಗು ಕಾಂಗ್ರೆಸ್ ವಾಗ್ದಾಳಿ
ಮಡಿಕೇರಿ: ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೇಶದ ೧೪ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಕೇಂದ್ರ ಸರ್ಕಾರದ ವೈಫಲ್ಯವೇ ನೇರ ಕಾರಣ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ದೂರಿದರು.
ಮೇ ೩ರ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯು ಕೇವಲ ಲೋಪವಲ್ಲ, ಇದು ಭಾರತದ ಪರೀಕ್ಷಾ ವ್ಯವಸ್ಥೆಯ ಸಂಪೂರ್ಣ ಕುಸಿತ. ಎನ್‌ಟಿಎ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯ ವಿದ್ಯಾರ್ಥಿಗಳಿಗೆ ದ್ರೋಹ ಬಗೆದಿದ್ದು, ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿದೆ ಎಂದು ಆರೋಪಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಪ್ರಶ್ನೆಪತ್ರಿಕೆ ಸಿಕ್ಕಿದ್ದು ಸಾಂಸ್ಥಿಕ ಭದ್ರತೆಯ ವೈಪಲ್ಯ. ಇದು ಮಕ್ಕಳ ಭವಿಷ್ಯದ ಮೇಲೆ ನಡೆಸಿದ ಚೆಲ್ಲಾಟ ಎಂದು ಕಿಡಿಕಾರಿದ ಅವರು, ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ಸುಧಾರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಮುನೀರ್ ಅಹಮ್ಮದ್, ಸುಜು ತಿಮ್ಮಯ್ಯ, ನಂದಕುಮಾರ್, ಕೊಟ್ಟಮುಡಿ ಹಂಸ ಇದ್ದರು.

