ನಂದಿನಿ ತುಪ್ಪ, ಬೆಣ್ಣೆ ದರ ಏರಿಕೆ: ಒಂದು ಲೀಟರ್ ತುಪ್ಪದ ರೇಟ್ ಗೊತ್ತಾ! : ದಸರಾ–ದೀಪಾವಳಿ ಬಳಿಕ ಕೆಎಂಎಫ್‌ನ ದಿಢೀರ್ ನಿರ್ಧಾರ
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ತನ್ನ ಜನಪ್ರಿಯ ನಂದಿನಿ ಬ್ರಾಂಡ್‌ನ ತುಪ್ಪ ಮತ್ತು ಬೆಣ್ಣೆಯ ದರವನ್ನು ಗಣನೀಯವಾಗಿ ಏರಿಸಿದೆ. ಹಬ್ಬದ ಕಾಲಾವಧಿ ಮುಗಿಯುತ್ತಿದ್ದಂತೆ ಬುಧವಾರದಿಂದಲೇ ಹೊಸ ದರ ಜಾರಿಗೆ ಬಂದಿದೆ.
ದರ ಪರಿಷ್ಕರಣೆ ಪ್ರಕಾರ, ಪ್ರತಿ ಲೀಟರ್ ನಂದಿನಿ ತುಪ್ಪದ ದರ ₹610ರಿಂದ ₹700ಕ್ಕೆ ಏರಿಕೆಯಾಗಿದೆ. ಅಂದರೆ ಪ್ರತಿ ಲೀಟರ್‌ಗೆ ₹90ರಷ್ಟು ಹೆಚ್ಚಳವಾಗಿದೆ. ಅರ್ಧ ಲೀಟರ್ ಪ್ಯಾಕೆಟ್ ದರ ₹305ರಿಂದ ₹350ಕ್ಕೆ ಏರಿಸಲಾಗಿದೆ. ಇದೇ ರೀತಿ 12 ಎಂಎಲ್, 50, 100, 200 ಎಂಎಲ್ ಪ್ಯಾಕೆಟ್‌ಗಳು, ಪೆಟ್‌ಜಾರ್‌ಗಳು, 5 ಲೀಟರ್ ಹಾಗೂ 15 ಕೆಜಿ ತುಪ್ಪದ ಟಿನ್‌ಗಳ ದರದಲ್ಲಿಯೂ ಪರಿಷ್ಕರಣೆ ಮಾಡಲಾಗಿದೆ.
ಬೆಣ್ಣೆಯ ದರದಲ್ಲಿಯೂ ಏರಿಕೆ ಮಾಡಲಾಗಿದ್ದು, ಪ್ರತಿ ಕೆ.ಜಿಗೆ ₹572ರಿಂದ ₹610ಕ್ಕೆ, ಅರ್ಧ ಕೆ.ಜಿ ಪ್ಯಾಕ್‌ಗೆ ₹286ರಿಂದ ₹310ಕ್ಕೆ ಏರಿಕೆ ಜಾರಿಯಾಗಿದೆ.
ಈ ದರ ಏರಿಕೆಯಿಂದ ಹೋಟೆಲ್, ಬೇಕರಿ ಹಾಗೂ ಸಿಹಿ ತಿನಿಸು ಉದ್ಯಮಗಳಲ್ಲಿ ಉತ್ಪನ್ನಗಳ ದರ ಏರಿಕೆಯ ಸಾಧ್ಯತೆ ಇದೆ.
ಕೆಎಂಎಫ್ ಪ್ರತಿ ತಿಂಗಳು ಸುಮಾರು 3,000 ಮೆಟ್ರಿಕ್ ಟನ್ ನಂದಿನಿ ತುಪ್ಪವನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಹೊಸ ದರದಿಂದ ವರ್ಷಕ್ಕೆ ₹300 ಕೋಟಿಗೂ ಹೆಚ್ಚು ಹೆಚ್ಚುವರಿ ಆದಾಯ ಬರಲಿದ್ದು, ಸಂಸ್ಥೆಯ ಆರ್ಥಿಕ ಸ್ಥಿರತೆಯ ನಿರೀಕ್ಷೆ ಹೆಚ್ಚಾಗಿದೆ.
ಹಾಲು ಒಕ್ಕೂಟಗಳ ಕಾರ್ಯನಿರ್ವಾಹಕ ನಿರ್ದೇಶಕರ ಸಭೆಯಲ್ಲಿ ನಂದಿನಿ ತುಪ್ಪ ಹಾಗೂ ಬೆಣ್ಣೆಯ ದರ ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ.
“ಖಾಸಗಿ ಕಂಪನಿಗಳ ತುಪ್ಪದ ದರ ಪ್ರತಿ ಕೆ.ಜಿಗೆ ₹800 ವರೆಗೆ ಇದೆ. ನಂದಿನಿ ತುಪ್ಪದ ದರ ಸದಾ ಖಾಸಗಿಗಿಂತ ಕಡಿಮೆ ಇದ್ದು, ಇತ್ತೀಚಿನ ಏರಿಕೆ ಬಳಿಕವೂ ಅದು ಗ್ರಾಹಕ ಸ್ನೇಹಿ ದರದಲ್ಲೇ ಲಭ್ಯ,” ಎಂದು ಕೆಎಂಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ 13 ಹಾಲು ಒಕ್ಕೂಟಗಳು ಪ್ರತಿದಿನ ಸುಮಾರು 1 ಕೋಟಿ ಲೀಟರ್ ಹಾಲು ಸಂಗ್ರಹಿಸುತ್ತಿವೆ. ಇದರಲ್ಲಿ 70 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, 8 ಲಕ್ಷ ಲೀಟರ್ ಕ್ಷೀರ ಭಾಗ್ಯ ಯೋಜನೆಯಡಿ ವಿತರಿಸಲಾಗುತ್ತದೆ. ಉಳಿದ ಹಾಲಿನಿಂದ ತುಪ್ಪ ಮತ್ತು ಬೆಣ್ಣೆ ತಯಾರಿಸಲಾಗುತ್ತದೆ.
ಇತ್ತೀಚೆಗೆ ಹಾಲು ಸಂಗ್ರಹ ಪ್ರಮಾಣ ಹೆಚ್ಚಾದರೂ ಮಾರಾಟ ಪ್ರಮಾಣದಲ್ಲಿ ಏರಿಕೆ ಕಾಣದ ಕಾರಣ, ರೈತರಿಗೆ ನೀಡುವ ಹಾಲಿನ ಖರೀದಿ ದರ ಹಾಗೂ ಸಹಾಯಧನ ಹೆಚ್ಚಿದ ಪರಿಣಾಮ ಉತ್ಪಾದನಾ ವೆಚ್ಚವೂ ಏರಿಕೆಯಾಗಿದೆ. ಈ ಆರ್ಥಿಕ ಸಮತೋಲನ ಸಾಧಿಸಲು ತುಪ್ಪ ಮತ್ತು ಬೆಣ್ಣೆಯ ದರ ಪರಿಷ್ಕರಣೆ ಅನಿವಾರ್ಯವಾಯಿತು ಎಂದು ಕೆಎಂಎಫ್ ಮೂಲಗಳು ಸ್ಪಷ್ಟಪಡಿಸಿವೆ.