ನಾಪೋಕ್ಲು:ಬೇತು ಅಂಗನವಾಡಿ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ
admincoorgdaily

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅನೀಮಿಯ ಕಾರ್ಯಗಾರ ಮತ್ತು ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಲಾದ ಶಿಬಿರದಲ್ಲಿ ಮಕ್ಕಳ ರಕ್ತಹೀನತೆ,ಅಪೌಷ್ಟಿಕತೆ ಯ ತಪಾಸಣೆ ನಡೆಸಲಾಯಿತು.ಶಿಬಿರದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುವ ಮಕ್ಕಳಿಗೆ ಔಷಧಿಗಳನ್ನು ವಿತರಿಸಲಾಯಿತು.ಐದು ವರ್ಷದೊಳಗಿನ ಮಕ್ಕಳಿಗೆ ನೀಡಬೇಕಾದ ಆಹಾರ ಪದ್ಧತಿ, ಸರಿಯಾದ ಸಮಯಕ್ಕೆ ಅನೀಮಿಯ ಆರೋಗ್ಯ ತಪಾಸಣೆ ನಡೆಸುವ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಪೋಷಕರಿಗೆ ತಿಳಿಸಿದರು.
ಶಿಬಿರದಲ್ಲಿ ಬೇತು ಅಂಗನವಾಡಿ ಕೇಂದ್ರಕ್ಕೆ ಒಳಪಡುವ ಐದು ವರ್ಷದೊಳಗಿನ ಮಕ್ಕಳನ್ನು ಪೋಷಕರು ಕರೆತಂದು ಆರೋಗ್ಯ ತಪಾಸಣೆ ನಡೆಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ಆರ್ ಬಿಎಸ್ ಕೆ ತಂಡದ ವೈದ್ಯಾಧಿಕಾರಿ ಡಾ. ಶೈಮಾ, ಶುಶ್ರೂಷಕಿ ಮಮತ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.
ಈ ಸಂದರ್ಭ ಬೇತು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಆಶಾ ಅಪ್ಪಣ್ಣ, ಸಹಾಯಕಿ ಲೀಲಾವತಿ, ಆಶಾ ಕಾರ್ಯಕರ್ತೆಯರಾದ ಗಾಯತ್ರಿ, ಬಿನಿಶಾ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪೋಷಕರು ಹಾಗೂ ಮಕ್ಕಳು ಹಾಜರಿದ್ದರು.