ಆ. 28ರಂದು ಎಸ್‌ಎನ್‌ಡಿಪಿ ವತಿಯಿಂದ ನಾರಾಯಣ ಗುರು ಜಯಂತಿ
admincoorgdaily

ಸಿದ್ದಾಪುರ:ಶ್ರೀ ನಾರಾಯಣ ಗುರು ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ) ಯೂನಿಯನ್ ಕೊಡಗು ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಆ. 28ರಂದು ಸಿದ್ದಾಪುರದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಎಸ್‌ಎನ್‌ಡಿಪಿ ಯೂನಿಯನ್ ಕೊಡಗು ಅಧ್ಯಕ್ಷ ವಿ.ಕೆ. ಲೋಕೇಶ್ ತಿಳಿಸಿದ್ದಾರೆ.
ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1956ರಲ್ಲಿ ಸಿದ್ದಾಪುರದಲ್ಲಿ ಇರಿಟ್ಟಿ ಶಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಘಟನೆ 1992ರಲ್ಲಿ 16 ಶಾಖೆಗಳೊಂದಿಗೆ ಕೊಡಗು ಯೂನಿಯನ್ ಆಗಿ ರೂಪುಗೊಂಡಿತು. ಇದೀಗ ಜಿಲ್ಲೆಯಲ್ಲಿ 51 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ನಾರಾಯಣ ಗುರುಗಳ ಆದರ್ಶ ಮತ್ತು ತತ್ವಗಳಡಿ ಸಮಾಜಮುಖಿ ಸೇವೆ ಸಲ್ಲಿಸುತ್ತಿವೆ ಎಂದರು.
ಜಾತಿ, ಧರ್ಮದ ಭೇದವಿಲ್ಲದೆ ಸಂಕಷ್ಟದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನಸಹಾಯ, ಅನಾರೋಗ್ಯ ಪೀಡಿತರಿಗೆ ನೆರವು, ಉಚಿತ ಆಂಬುಲೆನ್ಸ್ ಸೇವೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಶವ ಸಂರಕ್ಷಣಾ ಫ್ರೀಜರ್ ಬಾಕ್ಸ್‌ಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಆ. 28ರಂದು ಬೆಳಗ್ಗೆ 9.30ಕ್ಕೆ ಗುರುಪೂಜೆ, 10ಕ್ಕೆ ಧ್ವಜಾರೋಹಣ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಅಯ್ಯಪ್ಪ ದೇವಾಲಯದಿಂದ ಸ್ವರ್ಣಮಾಲಾ ಕಲ್ಯಾಣ ಮಂಟಪದವರೆಗೆ ವಾದ್ಯಗೋಷ್ಠಿ ಹಾಗೂ ಜಾನಪದ ಕಲಾತಂಡಗಳೊಂದಿಗೆ ಅಲಂಕೃತ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಮೂರ್ತಿಯ ಮೆರವಣಿಗೆ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಒಡೆಯರ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ರಾಜ್ಯ ಈಡಿಗ ಸಮಾಜದ ಉಪಾಧ್ಯಕ್ಷ ಮಹೇಶ್ ಕುಮಾರ್, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್, ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯನ್ ಹಾಗೂ ಉದ್ಯಮಿಗಳಾದ ಎಡಿಕೇರಿ ಪ್ರಸನ್ನ, ಟಿ.ಎಲ್. ಪ್ರವೀಣ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಇದೇ ಸಂದರ್ಭದಲ್ಲಿ ಸಾಧಕರು ಹಾಗೂ ಸಮಾಜದ ಪತ್ರಕರ್ತರನ್ನು ಸನ್ಮಾನಿಸಲಾಗುವುದು ಎಂದು ಲೋಕೇಶ್ ತಿಳಿಸಿದರು.
ಸಂಜೆ ಕಣ್ಣೂರು ಹರೀಶ್‌ಫೋಕ್ ಮೆಗಾ ಶೋ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಹರಿದಾಸ್, ಕಾರ್ಯದರ್ಶಿ ರೆಜಿತ್ ಕುಮಾರ್, ವನಿತಾ ಘಟಕದ ಜಿಲ್ಲಾಧ್ಯಕ್ಷೆ ರೀಶಾ ಸುರೇಂದ್ರನ್, ಪ್ರೇಮನಂದ, ಗಿರೀಶ್ ರಾಜಶೇಖರ್ ಹಾಗೂ ಮೋಹನ್ ದಾಸ್ ಉಪಸ್ಥಿತರಿದ್ದರು.