ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾಯಿಸಬೇಕೇ? ಈ ಮೂರು ವಿಧಾನಗಳನ್ನು ತಿಳಿದುಕೊಳ್ಳಿ

ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾಯಿಸಬೇಕೇ? ಈ ಮೂರು ವಿಧಾನಗಳನ್ನು ತಿಳಿದುಕೊಳ್ಳಿ
Photo credit: TV09

ಬೆಂಗಳೂರು, ಜ. 01: ಅಕ್ಷರದ ದೋಷ, ಮದುವೆಯ ನಂತರದ ಹೆಸರು ಬದಲಾವಣೆ ಅಥವಾ ಇತರ ವೈಯಕ್ತಿಕ ಕಾರಣಗಳಿಂದಾಗಿ ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಮಾಡುವ ಅಗತ್ಯ ಬಹುತೇಕ ಜನರಿಗೆ ಎದುರಾಗುತ್ತದೆ. ಬದಲಾವಣೆಯ ಸ್ವರೂಪಕ್ಕೆ ಅನುಗುಣವಾಗಿ ಆನ್‌ಲೈನ್, ಆಫ್‌ಲೈನ್ ಹಾಗೂ ಗೆಜೆಟ್ ನೋಟಿಫಿಕೇಶನ್ ಮೂಲಕ ಹೆಸರು ಬದಲಾಯಿಸುವ ವ್ಯವಸ್ಥೆ ಇದೆ.

ಆಧಾರ್‌ನಲ್ಲಿ ಹೆಸರು ಬದಲಾಯಿಸಲು ಲಭ್ಯವಿರುವ ಪ್ರಮುಖ ಮೂರು ವಿಧಾನಗಳು, ಅವುಗಳ ಪ್ರಕ್ರಿಯೆ, ಶುಲ್ಕ ಹಾಗೂ ಅಗತ್ಯ ದಾಖಲೆಗಳ ವಿವರ ಇಲ್ಲಿದೆ.

1. ಆನ್‌ಲೈನ್ ಮೂಲಕ ಹೆಸರು ಬದಲಾವಣೆ

ಆಧಾರ್‌ನಲ್ಲಿ ಸಣ್ಣ ಮಟ್ಟದ ಹೆಸರು ತಿದ್ದುಪಡಿಯನ್ನು ಆನ್‌ಲೈನ್ ಮೂಲಕ ಮಾಡಬಹುದು.

ಮೊದಲು ಯುಐಡಿಎಐಯ ಅಧಿಕೃತ ಪೋರ್ಟಲ್‌ನಲ್ಲಿ ಲಾಗಿನ್ ಆಗಿ, 12 ಅಂಕಿಯ ಆಧಾರ್ ಸಂಖ್ಯೆ ಹಾಗೂ ಒಟಿಪಿ ಮೂಲಕ ದೃಢೀಕರಣ ಪೂರ್ಣಗೊಳಿಸಬೇಕು. ನಂತರ ಜನಸಾಂಖ್ಯಿಕ ವಿವರಗಳ ಅಪ್‌ಡೇಟ್ ಆಯ್ಕೆಯಲ್ಲಿ ‘ಹೆಸರು’ ಆಯ್ಕೆ ಮಾಡಿ, ಸರಿಯಾದ ಹೆಸರನ್ನು ನಮೂದಿಸಬೇಕು.

ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ ಸೇರಿದಂತೆ ಮಾನ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು. ಈ ಸೇವೆಗೆ ರೂ. 50 ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಯುಆರ್‌ಎನ್ ಸಂಖ್ಯೆಯ ಮೂಲಕ ಅಪ್‌ಡೇಟ್ ಸ್ಥಿತಿಯನ್ನು ಪರಿಶೀಲಿಸಬಹುದು.

2. ಆಫ್‌ಲೈನ್ ಮೂಲಕ ಹೆಸರು ಬದಲಾವಣೆ

ಆನ್‌ಲೈನ್ ಸೌಲಭ್ಯ ಬಳಸದವರು ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ತೆರಳಿ ಹೆಸರು ಬದಲಾಯಿಸಬಹುದು.

ಅಲ್ಲಿ ಲಭ್ಯವಿರುವ ಆಧಾರ್ ಅಪ್‌ಡೇಟ್ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ನಿಗದಿತ ಶುಲ್ಕವನ್ನು ಕೇಂದ್ರದಲ್ಲಿಯೇ ಪಾವತಿಸಬಹುದು.

ಈ ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳು ಸಾಮಾನ್ಯವಾಗಿ ಅಕ್ಷರ ದೋಷ ಅಥವಾ ಸಣ್ಣ ಮಟ್ಟದ ಹೆಸರು ಬದಲಾವಣೆಗೆ ಮಾತ್ರ ಅನ್ವಯಿಸುತ್ತವೆ.

3. ಗೆಜೆಟ್ ನೋಟಿಫಿಕೇಶನ್ ಮೂಲಕ ಹೆಸರು ಬದಲಾವಣೆ

ಪೂರ್ಣ ಹೆಸರು ಬದಲಾವಣೆ ಅಥವಾ ಮಹತ್ವದ ತಿದ್ದುಪಡಿಗಳಿಗೆ ಗೆಜೆಟ್ ನೋಟಿಫಿಕೇಶನ್ ಪ್ರಕ್ರಿಯೆ ಕಡ್ಡಾಯವಾಗಿದೆ.ಮೊದಲು ಹಳೆಯ ಹೆಸರು, ಬದಲಾಗಬೇಕಿರುವ ಹೆಸರು ಹಾಗೂ ಬದಲಾವಣೆಯ ಕಾರಣವನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಬೇಕು. ನಂತರ ಒಂದು ಆಂಗ್ಲ ದಿನಪತ್ರಿಕೆ ಹಾಗೂ ಒಂದು ಪ್ರಾದೇಶಿಕ ದಿನಪತ್ರಿಕೆಯಲ್ಲಿ ಹೆಸರು ಬದಲಾವಣೆ ಕುರಿತು ಜಾಹೀರಾತು ಪ್ರಕಟಿಸಬೇಕು.

ಅಫಿಡವಿಟ್, ದಿನಪತ್ರಿಕೆ ಜಾಹೀರಾತು ಪ್ರತಿಗಳು, ಗುರುತು ಮತ್ತು ವಿಳಾಸದ ದಾಖಲೆಗಳು, ಫೋಟೋ ಸೇರಿ ಅರ್ಜಿಯನ್ನು ಗೆಜೆಟ್ ಕಚೇರಿಗೆ ಸಲ್ಲಿಸಬೇಕು. ಪರಿಶೀಲನೆಯ ನಂತರ ಗೆಜೆಟ್ ನೋಟಿಫಿಕೇಶನ್ ಪ್ರಕಟಿಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗೆಜೆಟ್ ಪ್ರತಿಯ ಆಧಾರದ ಮೇಲೆ ಆಧಾರ್‌ನಲ್ಲಿ ಹೆಸರು ಬದಲಾವಣೆ ಮಾಡಬಹುದು.

ಹೆಸರು ಬದಲಾವಣೆ ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಈ ಪ್ರಕ್ರಿಯೆಗೆ ಆಗುವ ವೆಚ್ಚದಲ್ಲಿ ವ್ಯತ್ಯಾಸ ಇರಬಹುದು. ಅಂದಾಜು ರೂ. 10 ಸಾವಿರದಿಂದ ರೂ. 12 ಸಾವಿರವರೆಗೆ ಖರ್ಚಾಗುವ ಸಾಧ್ಯತೆ ಇದೆ.

ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಸಂಪೂರ್ಣ ಹೆಸರು ಬದಲಾಯಿಸುವವರು, ಮಾನ್ಯ ದಾಖಲೆಗಳಿಲ್ಲದ ಸಂದರ್ಭಗಳಲ್ಲಿ ಗೆಜೆಟ್ ನೋಟಿಫಿಕೇಶನ್ ಮಾರ್ಗವನ್ನು ಅನುಸರಿಸುವುದು ಅನಿವಾರ್ಯವಾಗಿದೆ.