ಮೂರ್ನಾಡಿನಲ್ಲಿ ‘ನೆಪ್ಪುರ ನಳತ್ ಮಾಂಜತ ಮೊಟ್ಟ್’ : ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಭಾವನಮನ
ಮೂರ್ನಾಡು, ಆ.13: ಭಾರತದ ಸ್ವಾತಂತ್ರ್ಯದ 80ನೇ ವರ್ಷಾಚರಣೆಯ ಅಂಗವಾಗಿ ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ಹಾಗೂ ಮೂರ್ನಾಡು ಕೊಡವ ಸಮಾಜದ ಸಹಯೋಗದಲ್ಲಿ ‘ನೆಪ್ಪುರ ನಳತ್ ಮಾಂಜತ ಮೊಟ್ಟ್’ (Everlasting Footprints in the Shadow of Memories) ಪರಿಕಲ್ಪನೆಯಡಿ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಭಾವನಮನ ಸಲ್ಲಿಸುವ ಕಾರ್ಯಕ್ರಮವನ್ನು ಆಗಸ್ಟ್ 15ರಂದು ಮೂರ್ನಾಡಿನಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಕೊಡಗಿನ ಅನೇಕ ಹಿರಿಯರು ನಿಸ್ವಾರ್ಥ ಸೇವೆ ಸಲ್ಲಿಸಿದ್ದು, ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕೊಡಗಿಗೂ ತನ್ನದೇ ಆದ ಮಹತ್ವದ ಅಧ್ಯಾಯವಿದೆ. ಆದರೆ ಸ್ಥಳೀಯವಾಗಿ ನೈಜ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸತ್ಯಾಗ್ರಹಿಗಳಿಗೆ ದೊರೆಯಬೇಕಾದ ಗೌರವ ಇನ್ನೂ ಸಮರ್ಪಕವಾಗಿ ಸಿಕ್ಕಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾಡಳಿತದವರೆಗೆ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಹಾಗೂ ಅವರ ಕೊಡುಗೆಗಳನ್ನು ಸ್ಮರಿಸುವ ಕಾರ್ಯ ನಡೆಯಬೇಕು. ಇಲ್ಲವಾದಲ್ಲಿ ಈ ಮಣ್ಣಿನ ನೈಜ ಇತಿಹಾಸದ ಹಲವು ಅಧ್ಯಾಯಗಳು ಮುಂದಿನ ಪೀಳಿಗೆಗೆ ಮರೆಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ವಿಚಾರ ವಿನಿಮಯ, ದೇಶಭಕ್ತಿ ಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಹೋರಾಟಗಾರರ ನೆನಪುಗಳು ಮತ್ತು ತ್ಯಾಗಗಳನ್ನು ಬಿಂಬಿಸುವ ‘ನೆಪ್ಪುರ ಚೊಪ್ಪು’ ಎಂಬ ಛಾಯಾಚಿತ್ರ ಪ್ರದರ್ಶನವೂ ನಡೆಯಲಿದೆ.
ಆಗಸ್ಟ್ 15ರಂದು ಮಧ್ಯಾಹ್ನ 1 ಗಂಟೆಗೆ ಮೂರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ದೇಶ ತಕ್ಕರು ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ‘ಆದಿ ಬ್ರಹ್ಮಗಿರಿ’ ಪತ್ರಿಕೆಯ ಸಂಪಾದಕ ಉಳ್ಳಿಯಡ ಎಂ. ಪೂವಯ್ಯ, ವಿವಿಧ ಕೊಡವ ಸಮಾಜಗಳ ಅಧ್ಯಕ್ಷರು, ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಕೊಡಗಿನ ಗಾಂಧಿ ಪಂದ್ಯಂಡ ಬೊಳ್ಯಪ್ಪ ಮತ್ತು ಸೀತಮ್ಮ ಬೊಳ್ಯಪ್ಪ ಅವರ ಪುತ್ರ ಪಂದ್ಯಂಡ ವಿಜಯ್ ಬೊಳ್ಯಪ್ಪ ಭಾಗವಹಿಸಲಿದ್ದಾರೆ.
ಹೆಸರಾಂತ ಗಾಯಕರಾದ ಚೆಕ್ಕೇರ ಪಂಚಮ್ ಬೋಪಣ್ಣ, ಪಳಂಗಂಡ ರೀಟಾ ನಾಚಪ್ಪ, ಮೇಘನಾ ನಾಚಪ್ಪ, ಜೂನಿಯರ್ ಕಿಶೋರ್ ಕುಮಾರ್ ಖ್ಯಾತಿಯ ಮಾಳೇಟಿರ ಅಜಿತ್ ಪೂವಣ್ಣ ಹಾಗೂ ಬೊಪ್ಪಂಡ ತ್ರಿಶು ಗಣಪತಿ ಅವರು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮೂರ್ನಾಡಿನ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ.
ಸೋಮೆಯಂಡ ಕೌಸಲ್ಯ ಸತೀಶ್, ಪುದಿಯೊಕ್ಕಡ ಸುಜಾತ ದೇವಯ್ಯ, ಅಮ್ಮಾಟಂಡ ವಿಂದ್ಯಾ ದೇವಯ್ಯ, ಬಾಚೆಟ್ಟಿರ ರೇಶ್ಮ ಸುಬ್ಬಯ್ಯ ಹಾಗೂ ಪೆಮ್ಮಂಡ ಗೀತಾ ಪವಿತ್ರ ಅವರು ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
