ಕಾಲೇಜು ವಿದ್ಯಾರ್ಥಿನಿ ಯಾಮಿನಿ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು: ‘ಮಿಷನ್ ಯಾಮಿನಿ ಪ್ರಿಯಾ’ ವಾಟ್ಸಾಪ್‌ ಗ್ರೂಪ್‌ ರಚಿಸಿದ್ದ ಆರೋಪಿ!

Nov 7, 2025 - 19:37
 0  1.2k
ಕಾಲೇಜು ವಿದ್ಯಾರ್ಥಿನಿ ಯಾಮಿನಿ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು: ‘ಮಿಷನ್ ಯಾಮಿನಿ ಪ್ರಿಯಾ’ ವಾಟ್ಸಾಪ್‌ ಗ್ರೂಪ್‌ ರಚಿಸಿದ್ದ ಆರೋಪಿ!
ಆರೋಪಿ

ಬೆಂಗಳೂರು, ನ.7: ಪ್ರೀತಿ ಮಾಡಲು ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿ ಯಾಮಿನಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಶ್ರೀರಾಮಪುರ ಪೊಲೀಸರು ತನಿಖೆ ನಡೆಸಿ, ಮಹತ್ವದ ಮಾಹಿತಿ ಪತ್ತೆಹಚ್ಚಿದ್ದಾರೆ. ಆರೋಪಿಯ ಮೊಬೈಲ್‌ನ ಎಫ್‌ಎಸ್‌ಎಲ್‌ ವರದಿ ಸಿಕ್ಕಿದ್ದು, ಅದರಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.

ತನಿಖೆಯಿಂದ ತಿಳಿದುಬಂದಂತೆ, ಆರೋಪಿ ವಿಘ್ನೇಶ್ ಕಳೆದ ಜನವರಿಯಲ್ಲಿ ‘Mission Yamini Priya’ ಎಂಬ ಹೆಸರಿನಲ್ಲಿ ವಾಟ್ಸಾಪ್‌ ಗ್ರೂಪ್‌ ರಚಿಸಿದ್ದಾನೆ. ಯಾಮಿನಿಯ ಚಲನವಲನದ ಮೇಲೆ ನಿಗಾ ಇಡಲು ಈ ಗ್ರೂಪ್‌ ನಿರ್ಮಿಸಿದ್ದ ಎನ್ನಲಾಗಿದೆ. ತಾನೇ ಸಿಸಿಬಿ ಪೊಲೀಸನಾಗಿದ್ದು, ಯಾಮಿನಿ ತನ್ನ ತಂಗಿ ಎಂದು ಹೇಳಿ, ಆಕೆಯ ನಾಲ್ವರು ಸ್ನೇಹಿತರನ್ನು ಗ್ರೂಪ್‌ಗೆ ಸೇರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

 “ಯಾಮಿನಿ ಎಲ್ಲೆಲ್ಲಿ ಹೋಗುತ್ತಾಳೆ, ಯಾರೊಂದಿಗೆ ಮಾತನಾಡುತ್ತಾಳೆ ಎಂಬುದನ್ನು ತಿಳಿಸಬೇಕು. ತಿಳಿಸದಿದ್ದರೆ ನಿಮ್ಮ ವಿರುದ್ಧ ಸುಳ್ಳು ಕೇಸ್‌ ಹಾಕಿ ಜೀವನ ಹಾಳು ಮಾಡುತ್ತೇನೆ” ಎಂದು ಆರೋಪಿ ಸ್ನೇಹಿತರನ್ನು ಬೆದರಿಸಿದ್ದಾನೆ. ಇದರಿಂದ ಭಯಗೊಂಡ ವಿದ್ಯಾರ್ಥಿಗಳು ಯಾಮಿನಿಯ ಪ್ರತಿದಿನದ ಚಟುವಟಿಕೆಗಳ ಫೋಟೋ ಹಾಗೂ ವೀಡಿಯೊಗಳನ್ನು ಸೆರೆಹಿಡಿದು ಗ್ರೂಪ್‌ ನಲ್ಲಿ ಹಂಚುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಬನಶಂಕರಿಯ ಖಾಸಗಿ ಕಾಲೇಜಿನಲ್ಲಿ ಬಿ–ಫಾರ್ಮಾ ವ್ಯಾಸಂಗ ಮಾಡುತ್ತಿದ್ದ ಯಾಮಿನಿ, ಅ.16ರಂದು ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ವಿಘ್ನೇಶ್‌ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ನಂತರ ಪೊಲೀಸರ ಬಂಧನಕ್ಕೊಳಗಾದ ಆತ, ಪ್ರೀತಿಗೆ ಒಪ್ಪದಿದ್ದ ಕಾರಣದಿಂದಲೇ ಹತ್ಯೆ ಮಾಡಿದನೆಂದು ಒಪ್ಪಿಕೊಂಡಿದ್ದಾನೆ.

ಎಫ್‌ಎಸ್‌ಎಲ್‌ ವರದಿಯಲ್ಲಿ, ಯಾಮಿನಿಯ ಚಲನವಲನಕ್ಕೆ ಸಂಬಂಧಿಸಿದ ಫೋಟೋಗಳು ಹಾಗೂ ಗ್ರೂಪ್‌ ಚಾಟ್‌ಗಳ ಪುರಾವೆಗಳು ದೊರೆತಿದ್ದು, ಪೊಲೀಸರು ಈಗ ಗ್ರೂಪ್‌ನ ಸದಸ್ಯರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಪೊಲೀಸರು ಘಟನೆಯ ಪೂರ್ಣ ಹಿನ್ನೆಲೆ ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 1
Sad Sad 2
Wow Wow 0