ಮ್ಯೂಸಿಕ್ ಮೈಲಾರಿ ವಿರುದ್ಧದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು

Dec 20, 2025 - 16:56
 0  852
ಮ್ಯೂಸಿಕ್ ಮೈಲಾರಿ ವಿರುದ್ಧದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು
Photo credit: TV09

ಬಾಗಲಕೋಟೆ, ಡಿ.19: ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿ ವಿರುದ್ಧ ದಾಖಲಾಗಿರುವ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಸಂತ್ರಸ್ತೆಯೆಂದು ಹೇಳಲಾಗಿರುವ ಯುವತಿಯೊಬ್ಬಳು ಕ್ಷಮೆ ಯಾಚಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕುರಿತು ಆಕೆ ಸ್ಪಷ್ಟನೆ ನೀಡಿದ್ದಾಳೆ.

ವೈರಲ್ ಆಗಿರುವ ವಿಡಿಯೋ ಇತ್ತೀಚೆಗೆ ಮಾಡಿದದ್ದಲ್ಲ ಎಂದು ಸಂತ್ರಸ್ತೆ ಹೇಳಿದ್ದು, ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಳಿಕದ ಎರಡನೇ ದಿನ ಆ ವಿಡಿಯೋವನ್ನು ಬಲವಂತವಾಗಿ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾಳೆ. ಇದೀಗ ಕೆಲವರು ಅದನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಹರಡುತ್ತಿದ್ದಾರೆ ಎಂದು ಆಕೆ ತಿಳಿಸಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಸಂತ್ರಸ್ತೆ ತಿಳಿಸಿದ್ದಾಳೆ.

ವೈರಲ್ ವಿಡಿಯೋದಲ್ಲಿ ತಾನು ಮ್ಯೂಸಿಕ್ ಮೈಲಾರಿ ಹಾಗೂ ಆತನೊಂದಿಗೆ ಸಂಬಂಧ ಹೊಂದಿದ್ದ ಕೆಲವರ ವಿರುದ್ಧ ತಪ್ಪು ಆರೋಪ ಮಾಡಿದ್ದೇನೆ, ಕ್ಷಮಿಸಬೇಕು ಎಂದು ಹೇಳಿರುವ ದೃಶ್ಯಗಳಿವೆ. ಆದರೆ ಆ ದೃಶ್ಯಗಳನ್ನು ದುರುದ್ದೇಶಪೂರ್ವಕವಾಗಿ ಬಳಸಲಾಗುತ್ತಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. “ನಾನು ದಲಿತ ಹುಡುಗಿಯಾಗಿದ್ದು, ನನಗೆ ನ್ಯಾಯ ಬೇಕು. ಈ ವಿಡಿಯೋ ಈಗಿನದ್ದೆಂದು ಯಾರೂ ತಪ್ಪಾಗಿ ತಿಳಿದುಕೊಳ್ಳಬಾರದು” ಎಂದು ಆಕೆ ಮನವಿ ಮಾಡಿಕೊಂಡಿದ್ದಾಳೆ.

ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮ್ಯೂಸಿಕ್ ಮೈಲಾರಿ ವಿರುದ್ಧ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮೈಲಾರಿ ಡಿಸೆಂಬರ್ 17ರಂದು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ವೈರಲ್ ವಿಡಿಯೋಗಳ ಮೂಲ ಮತ್ತು ಅವು ಹರಡುವಿಕೆಯ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0