ಬೇತ್ರಿ ಕಾಫಿ‌ ತೋಟದಲ್ಲಿ ನವಜಾತ ಶಿಶು ಪತ್ತೆ

Apr 11, 2026 - 19:06
 0  907
ಬೇತ್ರಿ ಕಾಫಿ‌ ತೋಟದಲ್ಲಿ ನವಜಾತ ಶಿಶು ಪತ್ತೆ
ಸಾಂದರ್ಭಿಕ ಚಿತ್ರ

ವಿರಾಜಪೇಟೆ;ತಾಲೂಕಿನ ಬೇತ್ರಿ ಗ್ರಾಮದ ಕಾಫಿ ತೋಟದಲ್ಲಿ ಅಡಿಕೆ ಹಾಳೆಯಲ್ಲಿ ಸುತ್ತಿಡಲಾಗಿದ್ದ ನವಜಾತ ಹೆಣ್ಣು ಶಿಶುವನ್ನು ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಮಗುವಿಗೆ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮಗುವನ್ನು ಬಿಟ್ಟು ಹೋದ ಪೋಷಕರಿಗಾಗಿ ತನಿಖೆ ನಡೆಸುತ್ತಿದ್ದಾರೆ. ಇಂದು (ಏಪ್ರಿಲ್ 11) ಬೇತ್ರಿ ಗ್ರಾಮದ ಕಾಫಿ ತೋಟದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿದ ಸ್ಥಳೀಯರು ಹೋಗಿ ನೋಡಿದಾಗ, ಅಡಿಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಶಿಶು ಕಂಡುಬಂದಿದೆ. ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ.

 ಸ್ಥಳಕ್ಕೆ ಧಾವಿಸಿದ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಗುವು ಸ್ವಲ್ಪ ಅಸ್ವಸ್ಥಗೊಂಡಿದ್ದರಿಂದ ತಕ್ಷಣವೇ ಮಡಿಕೇರಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿದ್ದು, ಶಿಶುವು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ನವಜಾತ ಶಿಶುವನ್ನು ಕಾಫಿ ತೋಟದಲ್ಲಿ ಬಿಟ್ಟು ಹೋದ ಪಾಪಿ ಪೋಷಕರು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಹೆರಿಗೆಯಾದವರ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

What's Your Reaction?

Like Like 0
Dislike Dislike 2
Love Love 0
Funny Funny 0
Angry Angry 0
Sad Sad 0
Wow Wow 0