ಮಹಿಳೆಯರಿಗೆ ತಿಂಗಳಿಗೆ ಒಂದು ದಿನ ‘ಋತುಚಕ್ರ ರಜೆ’: ರಾಜ್ಯ ಸಚಿವ ಸಂಪುಟ ಅನುಮೋದನೆ

Oct 10, 2025 - 09:36
 0  446
ಮಹಿಳೆಯರಿಗೆ ತಿಂಗಳಿಗೆ ಒಂದು ದಿನ ‘ಋತುಚಕ್ರ ರಜೆ’: ರಾಜ್ಯ ಸಚಿವ ಸಂಪುಟ  ಅನುಮೋದನೆ
Photo credit: INDIA TODAY

ಬೆಂಗಳೂರು: ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್‌ ಘಟಕಗಳು, ಬಹುರಾಷ್ಟ್ರೀಯ ಕಂಪೆನಿಗಳು, ಐಟಿ ಹಾಗೂ ಇತರ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ‘ಋತುಚಕ್ರ ರಜೆ’ ನೀಡಲು ಉದ್ದೇಶಿಸಿರುವ ‘ಋತುಚಕ್ರ ರಜೆ ನೀತಿ–2025’ ಕ್ಕೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು, “ಮಹಿಳೆಯರ ಋತುಚಕ್ರದ ಆರೋಗ್ಯವನ್ನು ಅವರ ಹಕ್ಕುಗಳ ಹಾಗು ಕೆಲಸದ ಸ್ಥಳದ ಮೂಲಭೂತ ಅಂಶವೆಂದು ಪರಿಗಣಿಸಿ ಸರ್ಕಾರ ಈ ನೀತಿಯನ್ನು ರೂಪಿಸಿದೆ. ಈ ಕ್ರಮದಿಂದ ಮಹಿಳೆಯರು ಯಾವುದೇ ಕಳಂಕ ಅಥವಾ ಪರಿಣಾಮಗಳ ಭಯವಿಲ್ಲದೆ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವಂತಹ ಸಹಾಯಕ ವಾತಾವರಣವನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ,” ಎಂದು ಹೇಳಿದರು.

 “ಋತುಚಕ್ರ ರಜೆಗೆ ದೇಶದ ಮಟ್ಟದಲ್ಲಿ ಯಾವುದೇ ವಿಶೇಷ ಶಾಸನ ಇಲ್ಲದಿದ್ದರೂ, ಕೆಲವು ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಸಂಸ್ಥೆಗಳು ಈ ರೀತಿಯ ನೀತಿಗಳನ್ನು ಈಗಾಗಲೇ ಅನುಸರಿಸುತ್ತಿವೆ. ಕರ್ನಾಟಕವೂ ಇದೀಗ ಮಹಿಳೆಯರ ಕಲ್ಯಾಣದ ದೃಷ್ಟಿಯಿಂದ ಈ ಮಹತ್ವದ ಹೆಜ್ಜೆ ಇಟ್ಟಿದೆ,” ಎಂದು ಅವರು ಹೇಳಿದ್ದಾರೆ.

ಈ ನೀತಿಯಡಿ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಲಯಗಳು ಒಳಗೊಳ್ಳಲಿದ್ದು, ಅದರ ಅನುಷ್ಠಾನಕ್ಕೆ ಸಂಬಂಧಿಸಿದ ಸವಿವರ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 2