ಬಾರ್ ನಲ್ಲಿ ಸಿಗರೇಟ್ ವಿಚಾರವಾಗಿ ಎರಡು ಗುಂಪಿನ ನಡುವೆ ಹೊಡೆದಾಟ:ಓರ್ವ ಸಾವು
ಮಂಡ್ಯ , ಏಪ್ರಿಲ್ 06: ಕ್ಷುಲ್ಲಕ ಕಾರಣಗಳು ಹಾಗೂ ಆಸ್ತಿ ವಿವಾದಗಳಿಂದ ಮಂಡ್ಯದಲ್ಲಿ (Mandya) ಎರಡು ಪ್ರತ್ಯೇಕ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಒಬ್ಬ ಯುವಕ ಸಾವನ್ನಪ್ಪಿದ್ದಾನೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮದ್ದೂರು ಮತ್ತು ಕೆ.ಆರ್.ಪೇಟೆಯಲ್ಲಿ ಮಾರಾಮಾರಿ ನಡೆದಿದ್ದು, ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಎರಡೂ ಘಟನೆಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಿ ಸಂಧಾನ ನಡೆಯುತ್ತಿರುವಾಗಲೇ ಮತ್ತೆ ಗಲಾಟೆ ಮದ್ದೂರು ಪಟ್ಟಣದ ಪಟೇಲ್ ಸಾಮಿಲ್ ಸಮೀಪ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಪರಿಣಾಮವಾಗಿ ಮರಳಿಗ ಗ್ರಾಮದ ಯಶವಂತ್ ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಗೊರವನಹಳ್ಳಿ ಗ್ರಾಮದ ದರ್ಶನ್ ಮತ್ತು ಸಚಿನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಬಾರ್‌ನಲ್ಲಿ ಸಿಗರೇಟ್ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ ನಡೆದಿತ್ತು.
ಇದೇ ವಿಷಯಕ್ಕೆ ಕಳೆದ ರಾತ್ರಿ ರಾಜಿ ಮಾತುಕತೆ ನಡೆಯುವ ವೇಳೆ ಮತ್ತೆ ಜಗಳವಾಗಿದೆ. ಈ ಸಂದರ್ಭದಲ್ಲಿ ಯುವಕರು ದೊಣ್ಣೆಗಳಿಂದ ಪರಸ್ಪರ ದಾಳಿ ನಡೆಸಿಕೊಂಡಿದ್ದು, ಪರಿಣಾಮವಾಗಿ ಯಶವಂತ್ ಮೃತಪಟ್ಟಿದ್ದಾನೆ. ಮದ್ದೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಜೆ ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.