CRIME

ಮನುಷ್ಯರಂತೆ ವರ್ತಿಸುವ AI ಬಳಸಿ ಆನ್‌ಲೈನ್ ಜೂಜು; ಕೋಟ್ಯಂತರ ರೂಪಾಯಿ ವಂಚನೆ!

admincoorgdaily

ಬೆಂಗಳೂರು: ಮನುಷ್ಯರಂತೆ ವರ್ತಿಸುವಂತೆ ವಿನ್ಯಾಸಗೊಳಿಸಿದ ಕೃತಕ ಬುದ್ಧಿಮತ್ತೆ (AI) ತಂತ್ರಾಂಶಗಳನ್ನು ಬಳಸಿ ಆನ್‌ಲೈನ್ ಜೂಜು ನಡೆಸಿ, ಚಂದಾದಾರರಿಂದ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ, ವಿನ್‌ಝೋ ಗೇಮಿಂಗ್ ಕಂಪನಿಯ ಇಬ್ಬರು ಪ್ರವರ್ತಕರನ್ನು ಜಾರಿ ನಿರ್ದೇಶನಾಲಯ (ಈಡಿ) ಹತ್ತು ದಿನಗಳ ಕಸ್ಟಡಿಗೆ ಪಡೆದಿದೆ.

ದೆಹಲಿಯ ಕೇಂದ್ರ ಕಚೇರಿಯಿಂದ ತನಿಖೆ ನಡೆಸುತ್ತಿರುವ ಈಡಿ ವಿಚಾರಣೆಗೆ ಸೌಮ್ಯಸಿಂಗ್ ರಾಥೋಡ್ ಮತ್ತು ಪವನ್ ನಂದಾ ಬುಧವಾರ ಹಾಜರಾದರು. ಬೆಂಗಳೂರಿನ ಶಾಂತಿನಗರದಲ್ಲಿರುವ ಈಡಿ ವಲಯ ಕಚೇರಿಯಲ್ಲಿ ತಡರಾತ್ರಿಯವರೆಗೆ ವಿಚಾರಣೆ ನಡೆಯಿತು.

ನಂತರ ಅವರನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಮೊದಲಿಗೆ ಒಂದು ದಿನದ ಕಸ್ಟಡಿಗೆ ನೀಡಿದ್ದು, ಗುರುವಾರ ಪುನಃ ಹಾಜರುಪಡಿಸಿದ ನಂತರ ಕಸ್ಟಡಿಯನ್ನು ಹತ್ತು ದಿನಗಳಿಗೆ ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 18ರಿಂದ 22ರವರೆಗೆ ವಿನ್‌ಝೋ ಕಂಪೆನಿಯ ಹಲವಾರು ಕಚೇರಿಗಳ ಮೇಲೆ ಈಡಿ ನಡೆಸಿದ ದಾಳಿಯಲ್ಲಿ ₹505 ಕೋಟಿ ಮೌಲ್ಯದ ಠೇವಣಿ ಹಾಗೂ ಹೂಡಿಕೆಗಳು ಪತ್ತೆಯಾಗಿದ್ದು, ಅವುಗಳನ್ನೆಲ್ಲಾ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಹಿವಾಟಿನ ಮಾರ್ಗ, ಹಣದ ಮೂಲ ಮತ್ತು ವಿದೇಶಿ ಸಂಪರ್ಕಗಳ ಬಗ್ಗೆ ಈಡಿ ತನಿಖೆಯನ್ನು ಮುಂದುವರಿಸಿದೆ.