ಪ್ರೀತಿಯ ವಶೀಕರಣದ ನೆಪದಲ್ಲಿ ಉಡದ ಜನನಾಂಗಗಳ ಆನ್ಲೈನ್ ಮಾರಾಟ: ಮಾಂತ್ರಿಕನ ಬಂಧನ
ಬೆಂಗಳೂರು, ಜ.11: ಪ್ರೀತಿಯ ವಶೀಕರಣ ಹಾಗೂ ವೈಯಕ್ತಿಕ ಸಮಸ್ಯೆಗಳ ಪರಿಹಾರದ ಹೆಸರಿನಲ್ಲಿ ಉಡದ (ಮಾನಿಟರ್ ಹಲ್ಲಿ) ಜನನಾಂಗಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿದ್ದ ಸ್ವಯಂ ಘೋಷಿತ ಮಾಂತ್ರಿಕನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಬಂಧಿಸಿದ್ದಾರೆ. ಮೃದು ಹವಳ, ಹುಲಿ ಚರ್ಮ ಸೇರಿದಂತೆ ವನ್ಯಜೀವಿ ಉತ್ಪನ್ನಗಳ ಅಕ್ರಮ ವ್ಯಾಪಾರದಲ್ಲೂ ಆತ ತೊಡಗಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.
ಬಂಧಿತನನ್ನು ಮೂರ್ತಿ (45) ಎಂದು ಗುರುತಿಸಲಾಗಿದೆ. ಪ್ರೇಮಿಗಳ ನಡುವಿನ ಕಲಹ ನಿವಾರಣೆ, ಪ್ರೀತಿ ವಶೀಕರಣ ಹಾಗೂ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಮಾಂತ್ರಿಕ ಶಕ್ತಿ ಇದೆ ಎಂದು ನಂಬಿಸಿ, ಉಡದ ಜನನಾಂಗದ ಪ್ರತಿಯೊಂದು ತುಂಡನ್ನು ₹10,000ಕ್ಕೆ ಮಾರಾಟ ಮಾಡುತ್ತಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಜಿಒಗೆ ದೊರೆತ ಗುಪ್ತಚರ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು. ಎನ್ಜಿಒ ಸದಸ್ಯರೊಬ್ಬರು ಗ್ರಾಹಕರಂತೆ ನಟಿಸಿ ಮೂರ್ತಿಯನ್ನು ಸಂಪರ್ಕಿಸಿ, ನಾಗಶೆಟ್ಟಿಹಳ್ಳಿಯಲ್ಲಿರುವ ಆತನ ಮನೆಗೆ ಭೇಟಿ ನೀಡಿದರು. ಈ ವೇಳೆ ಆತ ತನ್ನ ಬಳಿ ಸಂಗ್ರಹಿಸಿದ್ದ ವನ್ಯಜೀವಿ ಉತ್ಪನ್ನಗಳನ್ನು ತೋರಿಸಿದ್ದಾನೆ. ಬಳಿಕ ಈ ಮಾಹಿತಿ ಡಿಆರ್ಐಗೆ ನೀಡಲಾಗಿದ್ದು, ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ದಾಳಿಯ ವೇಳೆ 206 ಉಡದ ಜನನಾಂಗಗಳು, ಸುಮಾರು 1.5 ಕೆಜಿ ಮೃದು ಹವಳ, ಹುಲಿ ಚರ್ಮ ಹಾಗೂ ಇತರ ಧಾರ್ಮಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರ್ತಿ ತಮಿಳುನಾಡು ಮತ್ತು ಇತರ ಪ್ರದೇಶಗಳಲ್ಲಿನ ಹಕ್ಕಿ ಪಿಕ್ಕಿ ಸಮುದಾಯದ ಸಂಪರ್ಕಗಳ ಮೂಲಕ ಈ ವನ್ಯಜೀವಿ ಉತ್ಪನ್ನಗಳನ್ನು ಪಡೆದುಕೊಳ್ಳುತ್ತಿದ್ದನೆಂದು ಆರೋಪಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಆನ್ಲೈನ್ ವ್ಯವಹಾರ ನಡೆಸುತ್ತಿದ್ದ ಮೂರ್ತಿಗೆ ದೇಶಾದ್ಯಂತ ಸುಮಾರು 25 ಸಾವಿರ ಭಕ್ತರು ಇದ್ದರು ಎಂದು ಹೇಳಲಾಗಿದೆ. ಪ್ರೀತಿ ಹಾಗೂ ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಹಲವರು ಆತನನ್ನು ಸಂಪರ್ಕಿಸುತ್ತಿದ್ದರು ಎಂಬುದೂ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಯ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಶಪಡಿಸಿಕೊಂಡ ವನ್ಯಜೀವಿ ಉತ್ಪನ್ನಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಬನ್ನೇರುಘಟ್ಟ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.