ದೇಶದ ಯುವಜನತೆಯು ಸಂಘಟಿತರಾಗಿ ಕೈ ಜೋಡಿಸಿದಾಗ ಮಾತ್ರ ವ್ಯಸನ ಮುಕ್ತ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸಾಧ್ಯ: ಡಾ. ಜ಼ಮೀರ್ ಅಹಮದ್
ಕುಶಾಲನಗರ: ದೇಶದ ಯುವಜನತೆಯು ಸಂಘಟಿತರಾಗಿ ಕೈ ಜೋಡಿಸಿದಾಗ ಮಾತ್ರ ವ್ಯಸನ ಮುಕ್ತ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಜ಼ಮೀರ್ ಅಹಮದ್ ಅಭಿಪ್ರಾಯಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಇವರ ವತಿಯಿಂದ ಶ್ರೀ ಸದ್ಗುರು ಪ್ರೌಢಶಾಲೆ, ಕೂಡಿಗೆ ಇಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು, ಮಾನವೀಯ ಮೌಲ್ಯ, ಸಂಸ್ಕಾರ, ಸನ್ನಡತೆ, ಸಮಾಜದಲ್ಲಿ ಉತ್ತಮ ಗೌರವವನ್ನು ತಂದುಕೊಡುತ್ತದೆ. ಯಾವುದೇ ವ್ಯಕ್ತಿ ವ್ಯಸನಗಳಿಗೆ ಬಲಿಯಾದರೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸ್ಥಿಮಿತತೆ ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ವಿದ್ಯಾರ್ಥಿ ಸಮುದಾಯವು ಮಾದಕ ಪದಾರ್ಥಗಳ ದಾಸ್ಯಕ್ಕೊಳಗಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬಾರದು.
ಮಾದಕ ವ್ಯಸನದ ಸುಳಿಗೆ ಸಿಲುಕಿದರೆ, ಸುಲಭದಲ್ಲಿ ಅದರಿಂದ ಹೊರಬರಲು ಸಾಧ್ಯವಿಲ್ಲ. ವ್ಯಸನಿಗಳಿಂದ ಆತನ ಕುಟುಂಬ ಹಾಗೂ ಸಮಾಜವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕ್ಷಣಿಕ ಸುಖಕ್ಕೆ ಬದುಕನ್ನು ಬಲಿಕೊಡದೆ ದುಶ್ಚಟಗಳ ದುಷ್ಪರಿಣಾಮ ಅರಿತು ಎಚ್ಚರದಿಂದಿದ್ದು ದೇಶದ ಸನ್ನಡತೆಯ ನಾಗರೀಕರಾಗಿ ಬದುಕು ನಡೆಸಬೇಕು. ಮಾದಕ ವಸ್ತುಗಳ ಜಾಲಕ್ಕೆ ಯುವ ಜನರು ಬಲಿಯಾಗದಂತೆ ಎಚ್ಚರ ವಹಿಸಲು ಜಾಗೃತಿ ಕಾರ್‍ಯಕ್ರಮಗಳನ್ನು ಕಾಲಕಾಲಕ್ಕೆ ರೂಪಿಸುತ್ತಿರಬೇಕು. ಯಾವುದೇ ರೀತಿಯ ದುಶ್ಚಟಗಳನ್ನು ತ್ಯಜಿಸುವಂತೆ ಜನಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಪುಷ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಯುವ ಸಮುದಾಯದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಮಾದಕ ವಸ್ತುವನ್ನು ದೂರ ಸರಿಸಿ ಉನ್ನತ ಶಿಕ್ಷಣ ಹಾಗೂ ಸದೃಢ ಭವಿಷ್ಯ ರೂಪಿಸಲು ಒತ್ತು ನೀಡಬೇಕು. ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ನೈಜ ಅರಿವು ಮೂಡಿಸಲು ಸಾಧ್ಯವಾದಲ್ಲಿ ಮಾದಕ ವಿರೋಧಿ ದಿನಾಚರಣೆ ಅರ್ಥಪೂರ್ಣವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಚ್ಯುತ್, ಸುಮಲತಾ, ರೇಣುಕಾ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.