ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಲು ಆದೇಶ ದುಬಾರೆಯಲ್ಲಿ ಆನೆ ಕಾದಾಟದ ವೇಳೆ ಮಹಿಳೆ ಸಾವು:ಈಶ್ವರ ಖಂಡ್ರೆ ಸಂತಾಪ

May 18, 2026 - 15:43
 0  1.9k
ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಲು ಆದೇಶ ದುಬಾರೆಯಲ್ಲಿ ಆನೆ ಕಾದಾಟದ ವೇಳೆ ಮಹಿಳೆ ಸಾವು:ಈಶ್ವರ ಖಂಡ್ರೆ ಸಂತಾಪ

ಮಡಿಕೇರಿ, ಮೇ 18: ಕೊಡಗು ಜಿಲ್ಲೆ ದುಬಾರೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾದಾಟದ ವೇಳೆ ಅನಿರೀಕ್ಷಿತವಾಗಿ ಆಯ ತಪ್ಪಿ ಬಿದ್ದ ಆನೆಯ ಕೆಳಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

ಇದು ಅತ್ಯಂತ ಆಘಾತಕರ ಘಟನೆ, ಆನೆಗಳನ್ನು ಸ್ನಾನ ಮಾಡಿಸುವಾಗ ನದಿಯ ಬಳಿ ನಿಂತು ನೋಡುತ್ತಿದ್ದ ತಮಿಳುನಾಡಿನ ಪ್ರವಾಸಿ ಮಹಿಳೆ ತುಳಸಿ (33) ಈ ಅಪಘಾತದಂತಹ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಮಗೆ ತಿಳಿಸಿದ್ದು, ಇದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.

ಸಾಕಾನೆಗಳಾದ ಕಂಚನ್ ಮತ್ತು ಮಾರ್ತಾಂಡ ಆನೆಗಳು ಸ್ನಾನ ಮಾಡಿಸುತ್ತಿದ್ದ ವೇಳೆ ಪರಸ್ಪರ ಕಾದಾಟ ನಡೆಸಿದ್ದು, ಮಾವುತರು ನಿಯಂತ್ರಿಸುತ್ತಿದ್ದರೂ ಮುನ್ನುಗ್ಗಿದ ಕಂಜನ್ ಆನೆ, ಮಾರ್ತಾಂಡ ಆನೆಗೆ ಗುದ್ದಿದ್ದು, ಮಾರ್ತಾಂಡ ಆಯ ತಪ್ಪಿ ಕೆಳಗೆ ಬಿದ್ದಾಗ, ಈ ಮಹಿಳೆ ಆನೆಯ ಕೆಳಗೆ ಸಿಲುಕಿ ಮೃತಪಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಯಾರೂ ಊಹಿಸದಂತಹ ಘಟನೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಇಂತಹ ಅಚಾತುರ್ಯಗಳು ಆಗದ ರೀತಿಯಲ್ಲಿ ಕ್ರಮ ವಹಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.

ನಿರ್ದಿಷ್ಟ ಅಂತರ ಕಾಯ್ದುಕೊಳ್ಳಲು ಸೂಚನೆ:

ಆನೆಗಳು ಸೇರಿದಂತೆ ವನ್ಯಜೀವಿಗಳನ್ನು ಎಷ್ಟೇ ಪಳಗಿಸಿದ್ದರೂ, ಪ್ರಾಣಿಗಳ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿದ್ದು, ಅವು ಯಾವಾಗ ಯಾವ ರೀತಿ ವರ್ತಿಸುತ್ತವೆ ಎಂದು ಊಹಿಸುವುದೂ ಕಷ್ಟವಾಗುತ್ತದೆ. ಹೀಗಾಗಿ ಆನೆಗಳ ಸೊಂಡಿಲು ಮುಟ್ಟುವುದು, ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದು, ಪ್ರವಾಸಿಗರಿಗೆ ಆನೆ ಮೈ ತೊಳೆಯಲು ಅವಕಾಶ ನೀಡುವುದು, ಅವರಿಂದ ಬೆಲ್ಲ, ಬಾಳೆಹಣ್ಣು ಇತ್ಯಾದಿ ಆಹಾರ ತಿನ್ನಿಸುವುದನ್ನು ನಿರ್ಬಂಧಿಸಲು ಕ್ರಮ ವಹಿಸುವಂತೆ ಮತ್ತು ವನ್ಯಜೀವಿಗಳಿಂದ ಪ್ರವಾಸಿಗರು ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 3
Wow Wow 0