ತಳಮಟ್ಟದ ಸಂಘಟನೆಯಿಂದಲೇ ಪಕ್ಷ ಬಲ: ತೀತಿರ ಧರ್ಮಜ ಉತ್ತಪ್ಪ
ವಿರಾಜಪೇಟೆ, ಜು.29: "ಪಕ್ಷ ಮೊದಲು, ಪದವಿ ನಂತರ ಎಂಬ ಮನೋಭಾವ ಎಲ್ಲಾ ಕಾರ್ಯಕರ್ತರ ಮನದಲ್ಲಿ ಮೂಡಬೇಕು. ತಳಮಟ್ಟದಿಂದ ಸಂಘಟನೆಯಾದರೆ ಮಾತ್ರ ಪಕ್ಷ ಬಲವರ್ಧನೆ ಸಾಧ್ಯ" ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹೇಳಿದರು. ಬ್ಲಾಕ್ ಕಾಂಗ್ರೆಸ್ ವಿರಾಜಪೇಟೆ ಘಟಕದ ವತಿಯಿಂದ ಶಾಸಕರ ಗೃಹ ಕಚೇರಿಯಲ್ಲಿ ನಡೆದ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿ ಆಯ್ಕೆಯಲ್ಲೂ ಕಲಹ, ಅಧಿಕಾರ ಮೋಹ, ಹಿಂಬದಿಯ ರಾಜಕಾರಣ ನಡೆಯುವುದು ಸರ್ವೇಸಾಮಾನ್ಯ. ಆದರೆ ಕಾರ್ಯಕರ್ತರು ಮೊದಲು ಪಕ್ಷ ಸಂಘಟನೆಯನ್ನು ಧ್ಯೇಯವಾಗಿಟ್ಟುಕೊಳ್ಳಬೇಕು. ಪಕ್ಷದಲ್ಲಿ ಸೇವೆ ಸಲ್ಲಿಸುವ ಮೂಲಕ ಪದವಿ ತಾನಾಗಿಯೇ ಅರಸಿಕೊಂಡು ಬರುತ್ತದೆ. ಜಾತಿ, ಮತ, ಪಂಥವೆಂದು ಭಾವಿಸದೆ ಎಲ್ಲರಿಗೂ ಸಮಾನವಾಗಿ ಪದವಿ ಮತ್ತು ಗೌರವ ನೀಡಲಾಗುತ್ತದೆ. ಆಂತರಿಕ ಕಲಹವನ್ನು ಬದಿಗೊತ್ತಿ ಪಕ್ಷ ಸಂಘಟನೆಯಲ್ಲಿ ಭಾಗವಹಿಸಬೇಕು ಎಂದು ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಭಾಗಗಳಲ್ಲಿ ನಡೆಯುವ ಅಹಿತಕರ ಘಟನೆಗಳಿಂದ ಪಕ್ಷಕ್ಕೆ ತೊಂದರೆಯಾಗುತ್ತಿದೆ. ಇದಕ್ಕೆ ಅವಕಾಶ ನೀಡದೆ ಏಳಿಗೆ, ವಲಯ, ಬ್ಲಾಕ್ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಎಲ್ಲಾ ಕಾರ್ಯಕರ್ತರು ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು.
ಬ್ಲಾಕ್ ಉಪಾಧ್ಯಕ್ಷರಾಗಿ, ಮಂಡೇಟಿರ ಅನೀಲ್ ಅಯ್ಯಪ್ಪ, ಜೋಕೀಂ ರೋಡ್ರಿಗಸ್, ರವೀಂದ್ರ ಭಾವೆಪ್ರಧಾನ ಕಾರ್ಯದರ್ಶಿಯಾಗಿ ಎ.ವಿ. ಮಂಜುನಾಥ್,ನಗರ ಅಧ್ಯಕ್ಷ ಮಾಳೇಟಿರ ಬೋಪಣ್ಣ,ಕಾಕೋಟುಪರಂಬು ವಲಯ ಅಧ್ಯಕ್ಷ ಬಟ್ಟಕಾಳಂಡ ರಾಜ ದಿನೇಶ್,ಅಮ್ಮತ್ತಿ ವಲಯ ಅಧ್ಯಕ್ಷಬ ಕೆ.ಎನ್. ರಾಜನ್ ಅವರಿಗೆ ಆದೇಶ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮತೀನ್, ಎಸ್.ಸಿ ಘಟಕ ಅಧ್ಯಕ್ಷ ಮಹದೇವ್, ಯುವ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಶಬೀರ್, ಉಪಾಧ್ಯಕ್ಷ ಸಫ್ವಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
