ಕಸ್ತೂರಿ ರಂಗನ್ ವರದಿಯಿಂದ ಕೊಡಗಿನ ಜನತೆ ಆತಂಕಪಡಬೇಕಾದ ಅಗತ್ಯ ಇಲ್ಲ:ಸಂಸದ ಯದುವೀರ್ ಒಡೆಯರ್
admincoorgdaily

ಮಡಿಕೇರಿ: ಕಸ್ತೂರಿರಂಗನ್ ವರದಿಯಿಂದ ಕೊಡಗಿನ ಜನತೆ ಆತಂಕಪಡಬೇಕಾದ ಅಗತ್ಯ ಖಂಡಿತಾ ಇಲ್ಲ. ಕೇಂದ್ರ ಸರ್ಕಾರದೊಂದಿಗೆ ನಿರಂತರ ಚರ್ಚೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಯ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು, ರೈತ ಮುಖಂಡರು ಹಾಗೂ ಪರಿಸರ ಪ್ರೇಮಿಗಳೊಂದಿಗೆ ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಮಾತನಾಡಿದ ಸಂಸದರು, ಇದು ಇನ್ನೂ ಕರಡು ಅಧಿಸೂಚನೆ ಮಾತ್ರ. ಇದರಲ್ಲಿ ಇನ್ನೂ ಹಲವು ಹಂತದ ಚರ್ಚೆಗಳು ಬಾಕಿ ಇವೆ. ಕೊಡಗಿನ ಜನರು ಪ್ರಕೃತಿಯನ್ನು ರಕ್ಷಿಸುವ ಮತ್ತು ಗೌರವಿಸುವ ಗುಣ ಹೊಂದಿದ್ದಾರೆ. ಅವರನ್ನು ಅನ್ಯಾಯವಾಗಿ ಅರಣ್ಯ ಕಾಯ್ದೆ ವ್ಯಾಪ್ತಿಗೆ ತಳ್ಳುವುದು ಸರಿಯಲ್ಲ ಎಂದರು.ಕೇರಳ ಮಾದರಿಯಲ್ಲಿ ಕೊಡಗಿನಲ್ಲೂ ಬಫರ್ ಝೋನ್ ಅನ್ನು 0 ಕಿ.ಮೀ. ಮಾಡಬೇಕು. ಜನವಸತಿ ಇರುವ ಪ್ರದೇಶ ಹಾಗೂ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಅರಣ್ಯ ವ್ಯಾಪ್ತಿ / ಇಎಸ್‌ಝೆಡ್‌ಗೆ ಸೇರಿಸಬಾರದು. ಕಸ್ತೂರಿರಂಗನ್ ವರದಿಯನ್ನು ಯಥಾವತ್ ಅನುಷ್ಠಾನ ಮಾಡುವುದು ಅಸಾಧ್ಯ ಎಂದು ಹೇಳಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಫಿಸಿಕಲ್ ವೆರಿಫಿಕೇಷನ್ (ಸ್ಥಳ ಪರಿಶೀಲನೆ) ಮಾಡಬೇಕು. ಕೇಂದ್ರ ಸರ್ಕಾರ ಇದಕ್ಕೆ ಈಗಾಗಲೇ ಒಪ್ಪಿಗೆ ಸೂಚಿಸಿದೆ. ನಮ್ಮ ರಾಜ್ಯದಲ್ಲೂ ಫಿಸಿಕಲ್ ವೆರಿಫಿಕೇಷನ್ ಆಗಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿಬಂದಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ರೈತರು ಭಾಗವಹಿಸಿದ್ದರು.