ಸಾಕು ನಾಯಿಯ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತು

Jan 17, 2026 - 00:18
 0  1.2k
ಸಾಕು ನಾಯಿಯ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತು
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ, ಜ.16: ನಗರದ ಗುರುದೇವ ನಗರದಲ್ಲಿ ಸಾಕು ನಾಯಿಗೆ ಸಂಬಂಧಿಸಿದ ವಿವಾದವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುದೇವ ನಗರ ನಿವಾಸಿ ಪರಶುರಾಮ ಅವರು ಸಲ್ಲಿಸಿದ ದೂರಿನ ಪ್ರಕಾರ, ವಿಲ್ಸನ್ ಹಾಗೂ ವೈಷ್ಣವಿ ದಂಪತಿ ಸಾಕಿರುವ ರಾಟ್‌ ವೀಲರ್ ನಾಯಿ ಮದನ ಎಂಬ ಬಾಲಕನಿಗೆ ಕಚ್ಚಿದೆ. ಬಾಲಕನನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ ವೇಳೆ, ಆರೋಪಿತರು ತಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ‘ನಾಯಿಗೆ ಹೊಡೆದಿದ್ದೀರಿ’ ಎಂದು ಆರೋಪಿಸಿ ವಿಲ್ಸನ್ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಲ್ಲೆಯ ನಂತರ ವಿಲ್ಸನ್ ಪರಶುರಾಮ ಅವರ ಮನೆಗೆ ತೆರಳಿ ಮತ್ತೊಮ್ಮೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವೂ ಇದೆ. ಈ ಘಟನೆ ಜನವರಿ 14ರಂದು ನಡೆದಿದ್ದು, ಅದೇ ದಿನ ಪ್ರಕರಣ ದಾಖಲಿಸಲಾಗಿದೆ.

ಸಾಕು ನಾಯಿಗಳಿಂದ ಈ ಹಿಂದೆ ಕೂಡ ತೊಂದರೆಗಳು ಉಂಟಾಗಿವೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದೂರು ಸ್ವೀಕರಿಸಿರುವ ಪೊಲೀಸರು ವೈದ್ಯಕೀಯ ವರದಿ ಹಾಗೂ ಇತರೆ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0