ಫೋನ್ ಪೇ ಪ್ರೇಮ, ಬಳಿಕ ದೈಹಿಕ ಸಂಪರ್ಕ: 9ನೇ ತರಗತಿ ವಿದ್ಯಾರ್ಥಿನಿಯೀಗ ಗರ್ಭಿಣಿ!
ಮಸ್ಕಿ, ನ.7: ಫೋನ್ ಪೇ ಮೂಲಕ ಆರಂಭವಾದ ಪರಿಚಯವು ಪ್ರೇಮಕ್ಕೆ ತಿರುಗಿ, ಕೊನೆಗೆ 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಘಟನೆಯೊಂದು ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿ ಶಿವಮೂರ್ತಿ (25) ಎಂಬಾತನನ್ನು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ವಿದ್ಯಾರ್ಥಿನಿಯನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತೆಯ ತಂದೆ ಸ್ಥಳೀಯವಾಗಿ ಮಾಂಸದ ಅಂಗಡಿ ನಡೆಸುತ್ತಿದ್ದು, ಆರೋಪಿ ಶಿವಮೂರ್ತಿ ಅಲ್ಲಿಗೆ ಮಾಂಸ ಖರೀದಿಸಲು ಬಂದು ಫೋನ್ ಪೇ ಮೂಲಕ ಹಣ ಪಾವತಿಸಿದ್ದಾನೆ.
ಆ ವೇಳೆ ಸಂತ್ರಸ್ತೆಯ ಮೊಬೈಲ್ ಸಂಖ್ಯೆಯನ್ನು ಪಡೆದ ಆತ ನಂತರ ಸಂಪರ್ಕ ಸಾಧಿಸಿ, ಚಾಟ್ ಹಾಗೂ ಕರೆಗಳ ಮೂಲಕ ಆಕೆಯೊಂದಿಗೆ ಪ್ರೇಮ ಸಂಬಂಭ ಬೆಳೆಸಿಕೊಂಡಿದ್ದಾನೆ. ಪ್ರೇಮದ ಬಲೆ ಕೊನೆಗೆ ದೈಹಿಕ ಸಂಪರ್ಕದವರೆಗೆ ತಲುಪಿದ್ದು, ವಿದ್ಯಾರ್ಥಿನಿ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ. ಅಕ್ಟೋಬರ್ 30ರ ರಾತ್ರಿ ವಿದ್ಯಾರ್ಥಿನಿ ಮನೆಯಿಂದ ನಾಪತ್ತೆಯಾಗಿದ್ದಳು.
ಕುಟುಂಬದವರು ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯ ವೇಳೆ ಪೊಲೀಸರು ಬಾಲಕಿಯನ್ನು ಪತ್ತೆಹಚ್ಚಿದಾಗ ಆಕೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಮಸ್ಕಿ ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.