ಭತ್ತದ ಕೃಷಿ ಉತ್ತೇಜನಕ್ಕೆ ನಾಟಿ ನೆಡುವ ಕಾರ್ಯಕ್ರಮ

Aug 12, 2026 - 20:51
 0  76
ಭತ್ತದ ಕೃಷಿ ಉತ್ತೇಜನಕ್ಕೆ ನಾಟಿ ನೆಡುವ ಕಾರ್ಯಕ್ರಮ

ಪೊನ್ನಂಪೇಟೆ, ಆ.11: ಆತ್ಮ ಯೋಜನೆಯಡಿ ಕೊಡಗು ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ವಿರಾಜಪೇಟೆ ತಾಲ್ಲೂಕು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಭತ್ತದ ಕೃಷಿ ಉತ್ತೇಜನಕ್ಕಾಗಿ ನಾಟಿ ನೆಡುವ ಕಾರ್ಯಕ್ರಮ ನಲ್ಲೂರು ಗ್ರಾಮದಲ್ಲಿ ನಡೆಯಿತು.

ನಲ್ಲೂರು ಗ್ರಾಮದ ರೈತ ನಾಯಕ ಸುಜಯ್ ಬೋಪಯ್ಯ ಅವರ ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಕಾಯಕ ರೈತ ಕಾರ್ಮಿಕರು, ಕೃಷಿ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಭತ್ತದ ನಾಟಿ ಕಾರ್ಯದಲ್ಲಿ ಭಾಗವಹಿಸಿದರು.ಭತ್ತದ ಕೃಷಿಯ ಮಹತ್ವವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪರಿಚಯಿಸುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹುದೂರಿನ ಪ್ರಗತಿಪರ ರೈತ ರವಿಶಂಕರ್ ಭಾಗವಹಿಸಿದ್ದರು ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ರೈತ ಸಂಘ ಅಧ್ಯಕ್ಷ ಕಾಡ್ಯಾಮಾಡ ಮನು ಸೋಮಯ್ಯ ಮಾತನಾಡಿ ರೈತ ಸಂಘ ಆಡಳಿತ ವರ್ಗದ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಇರಬೇಕು ಏಕೆಂದರೆ ಹೋರಾಟದಿಂದ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ, ರೈತ ಸಂಘದವರು ಅಧಿಕಾರಗಳನ್ನು ಕೇವಲ ರೈತರ ಬಡಜನರ ಶೋಷಿತ ವರ್ಗದವರ ತೊಂದರೆಗಳಿಗೆ ಸೀಮಿತವಾದ ಪ್ರಶ್ನೆಗಳನ್ನು ಕೇಳುತ್ತೇವೆ ಅದು ಉತ್ತಮ ಉದ್ದೇಶಕ್ಕಾಗಿಯೆ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

 ಕೃಷಿ ಇಲಾಖೆಯ ಅಧಿಕಾರಿಗಳು ಸರಕಾರಕ್ಕೆ ವರದಿಗಳನ್ನು ಕೊಡುವಾಗ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವರದಿಗಳನ್ನು ಸಿದ್ಧಪಡಿಸಿ ರೈತರಿಗೆ ಪ್ರೋತ್ಸಾಹ ಧನ ಸಿಗುವಂತೆ ನೋಡಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು. ಫಿಸಿಕರಿಗೆ ಕೊಡುವ ಸಬ್ಸಿಡಿ ಯನ್ನು ಆಯಾ ಸಮಯಕ್ಕೆ ಸರಿಯಾಗಿ ದೊರಕುವ ಹಾಗೆ ಮುತುವರ್ಜಿ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಶಾಲಾ ಮಕ್ಕಳು ತಮ್ಮ ಕಲಿಕೆಯ ಜೊತೆಗೆ ಕೃಷಿ ಕಾಯಕದ ಬಗೆಯು ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಕೃಷಿ ಸಂರಕ್ಷಣಾ ವಿಜ್ಞಾನಿ ವೀರೇಂದ್ರ ಕುಮಾರ್ ಕೆ ವಿ ಮಾತನಾಡಿ, ಈತ್ತೀಚಿನ ದಿನಗಳಲ್ಲಿ ರೈತರಲ್ಲಿ ಭತ್ತದ ಬೆಳೆಗಳ ಬಗ್ಗೆ ಆಸಕ್ತಿ ಕಡಿಮೆಯಾಗಿ ವಾಣಿಜ್ಯ ಬೆಳೆಗಳತ್ತ ಹೆಚ್ಚು ಆಸಕ್ತಿ ತೋರುತ್ತಿರುವ ಸಂದರ್ಭದಲ್ಲಿ ರೈತ ಸಂಘದವರು ಇಂತಹ ಭತ್ತದ ನಾಟಿ ಕಾರ್ಯಕ್ರಮ ಮಾಡಿರುವುದು ರೈತರಿಗೆ ಹೆಚ್ಚು ಪ್ರೇರಣೆ ನೀಡುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದರು.

 ಗೋಣಿಕೊಪ್ಪಲು ಕೆವಿಕೆ ಮುಖ್ಯಸ್ಥ ಡಾ. ಮುರುಳಿಧರನ್ ಬಿ ಎಂ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೊರಗಿನಿಂದ ಬರುವ ಅಕ್ಕಿಯಲ್ಲಿ ರಾಸಾಯನಿಕಗಳು ಹೆಚ್ಚಿರುವ ಕಾರಣ ಸ್ಥಳೀಯವಾಗಿ ಭತ್ತ ಕೃಷಿ ಮಾಡಿದರೆ ನಮ್ಮ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ ಆರ್ ಎನ್ ಕೆಂಚಾರೆಡ್ಡಿ ಮಾತನಾಡಿ ಭತ್ತ ಕೇವಲ ಊಟಕ್ಕೆ ಮಾತ್ರ ಸೀಮಿತವಾಗದೆ ಅದು ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ, ಕೊಡಗಿನ ಬತ್ತ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ಸಾವಯವದಿಂದ ಕೂಡಿರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ಇದೆ ಎಂದು ಹೇಳಿದರು.

ಭತ್ತದ ಕೃಷಿಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಪೊನ್ನಂಪೇಟೆ ಕೃಷಿ ಇಲಾಖೆ ಅಧಿಕಾರಿ ಮೀರಾ ಸಭೆಯಲ್ಲಿ ರೈತ ಸಂಪರ್ಕ ಕೇಂದ್ರದಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ರೈತರಿಗೆ ನೀಡಿದರು.

 ಇಲಾಖೆಯಿಂದ ದೊರೆಯುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು. ರೈತ ಸಂಘ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಸ್ಥಳೀಯ ರೈತರು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕೃಷಿ ಉಪ ನಿರ್ದೇಶಕ ಡಾ. ಸೋಮಶೇಖರ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ ಡೀನ್ ಡಾ.ಸಿ ಜೆ ಕುಶಾಲಪ್ಪ, ಕೃಷಿ ಅಧಿಕಾರಿಗಳು ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0