19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಪೊಲೀಸರು: ಇಬ್ಬರು ಕಾನ್ಸ್ಟೆಬಲ್ ಗಳ ಬಂಧನ

Oct 1, 2025 - 11:05
 0  1.2k
19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಪೊಲೀಸರು: ಇಬ್ಬರು ಕಾನ್ಸ್ಟೆಬಲ್ ಗಳ ಬಂಧನ

ತಿರುವಣ್ಣಾಮಲೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ 19 ವರ್ಷದ ಯುವತಿಯ ಮೇಲೆ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳನ್ನು ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾದೆ. ಈ ಘಟನೆ ರಾಜ್ಯದಾದ್ಯಂತ ಭಾರೀ ಆಕ್ರೋಶವನ್ನು ಉಂಟುಮಾಡಿದೆ.

 ಎಂಡಾಲ್ ಗ್ರಾಮದ ಬಳಿ ನಿಯಮಿತ ವಾಹನ ತಪಾಸಣೆ ನಡೆಸುತ್ತಿದ್ದ ಕಾನ್ಸ್ಟೆಬಲ್ಗಳಾದ ಸುಂದರ್ ಮತ್ತು ಸುರೇಶ್ ರಾಜ್, ಟ್ರಕ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ಯುವತಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

 ಆಘಾತಕ್ಕೊಳಗಾದ ಯುವತಿ ಕಾಲ್ನಡಿಗೆಯಲ್ಲಿ ಎಂಡಾಲ್ ಗ್ರಾಮ ತಲುಪಿದ್ದು, ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ನಂತರ ಪ್ರಕರಣವನ್ನು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಅಮಾನತುಗೊಳಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು, "ಸಾಕ್ಷ್ಯ ಸಂಗ್ರಹಣೆ ಪ್ರಕ್ರಿಯೆ ಮುಂದುವರಿದಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

 ಈ ಘಟನೆಯ ಹಿನ್ನೆಲೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಆಡಳಿತಾರೂಢ ಡಿಎಂಕೆ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. "ಮಹಿಳಾ ಭದ್ರತೆ ಎಷ್ಟಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಾನೂನು ಜಾರಿ ಸಂಸ್ಥೆಯೇ ಮಹಿಳೆಯರಿಗೆ ಅಪಾಯವಾಗಿ ಪರಿಣಮಿಸುತ್ತಿದೆ. ಈ ಸ್ಥಿತಿಗೆ ಡಿಎಂಕೆ ಸರ್ಕಾರವೇ ಕಾರಣ" ಎಂದು ಅವರು ಟೀಕಿಸಿದ್ದಾರೆ.

 "ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರ ಈ ಘಟನೆಗೆ ತಲೆ ತಗ್ಗಿಸಬೇಕು. ಬದುಕುಳಿದ ಯುವತಿಗೆ ಸೂಕ್ತ ವೈದ್ಯಕೀಯ ಆರೈಕೆ ಒದಗಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು" ಎಂದು ಇಪಿಎಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 2
Wow Wow 0