ಮನೆಗಳ್ಳತನ ತಡೆಗೆ ಪೊಲೀಸರ ಮಾಸ್ಟರ್ ಪ್ಲ್ಯಾನ್; AI ತಂತ್ರಜ್ಞಾನ ಸಹಾಯದಿಂದ ‘ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ’ ಜಾರಿ

Nov 26, 2025 - 00:02
 0  397
ಮನೆಗಳ್ಳತನ ತಡೆಗೆ ಪೊಲೀಸರ ಮಾಸ್ಟರ್ ಪ್ಲ್ಯಾನ್;  AI ತಂತ್ರಜ್ಞಾನ ಸಹಾಯದಿಂದ ‘ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ’ ಜಾರಿ
Photo credit: TV09 (ಫೋಟೋ:LHMS ವ್ಯವಸ್ಥೆ)

ತುಮಕೂರು, ನ. 25: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳರ ದರೋಡೆ ಪ್ರಕರಣಗಳು ರಾಜ್ಯದಾದ್ಯಂತ ಹೆಚ್ಚುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ತುಮಕೂರು ಪೊಲೀಸರು AI ತಂತ್ರಜ್ಞಾನ ಆಧಾರಿತ ನೂತನ ಪರಿಹಾರಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲೇ ಮೊದಲ ಬಾರಿಗೆ ‘ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ’ (LHMS) ಅನ್ನು ಜಾರಿಗೊಳಿಸಿ ಮನೆಗಳ್ಳತನಕ್ಕೆ ಬ್ರೇಕ್‌ ಹಾಕುವತ್ತ ಹೆಜ್ಜೆ ಇಟ್ಟಿದ್ದಾರೆ.

ದೂರ ಪ್ರಯಾಣ, ಅವಶ್ಯಕ ಕೆಲಸಗಳು ಅಥವಾ ಬೇರೆ ಕಾರಣಗಳಿಗೆ ಮನೆಗೆ ಬೀಗ ಹಾಕಿ ತೆರಳುವವರಿಗಾಗಿ LHMS ಅಭಿವೃದ್ಧಿಪಡಿಸಲಾಗಿದೆ. ನಿವಾಸಿಗಳು ವಿಶೇಷ ಆ್ಯಪ್ ಮುಖಾಂತರ ಮನೆಯನ್ನು ನೊಂದಾಯಿಸಿದರೆ, ಪೊಲೀಸರು ಆ ಮನೆಯಲ್ಲಿ ವೈರ್‌ಲೆಸ್ ಸಿಸಿ ಕ್ಯಾಮರಾ ಅಳವಡಿಸಲಿದ್ದಾರೆ. ಮೋಷನ್ ಡಿಟೆಕ್ಷನ್ ಹಾಗೂ AI ತಂತ್ರಜ್ಞಾನ ಹೊಂದಿರುವ ಈ ಕ್ಯಾಮರಾಗಳು ಯಾವುದೇ ಅನುಮಾನಾಸ್ಪದ ಚಲನವಲನ ಕಂಡುಬಂದರೆ ತಕ್ಷಣ ಅಲರ್ಟ್ ಕಳುಹಿಸುವ ಸಾಮರ್ಥ್ಯ ಹೊಂದಿವೆ.

ಕಮಾಂಡ್ ಸೆಂಟರ್‌ನಿಂದ ನೇರ ನಿಗಾ:

ಈ ಕ್ಯಾಮರಾಗಳ ನಿಗಾವ್ಯವಸ್ಥೆ ನೇರವಾಗಿ ಎಸ್ಪಿ ಕಚೇರಿಯ ಪಕ್ಕದಲ್ಲಿರುವ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‌ಗೆ ಜೋಡಿಸಲಾಗಿದ್ದು, ಸಿಬ್ಬಂದಿ 24x7 ಪರಿಸ್ಥಿತಿ ಮೇಲೆ ಕಣ್ಣಿಟ್ಟಿದ್ದಾರೆ. ಅಲರ್ಟ್ ಬಂದ ಕೂಡಲೇ ಸ್ಮಾರ್ಟ್ ಸಿಟಿ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವ ವ್ಯವಸ್ಥೆ ಮಾಡಿದ್ದಾರೆ.

ಆ್ಯಪ್ ಮೂಲಕ ಮಾಹಿತಿ ನೀಡದಿದ್ದರೂ ಮನೆ-ಮನೆಗೆ ನಿಯೋಜನೆಗೊಂಡಿರುವ ಬೀಟ್‌ ಪೊಲೀಸ್ ಸಿಬ್ಬಂದಿಗೆ ನೇರವಾಗಿ ತಿಳಿಸಿದರೆ, ಬೀಗ ಹಾಕಿರುವ ಮನೆಗಳ ಮೇಳ ಲೆ ಇದೇ ರೀತಿಯ ನಿಗಾವ್ಯವಸ್ಥೆ ಸಕ್ರಿಯವಾಗಲಿದೆ.

ವರ್ಷಗಳ ಕಲ್ಪನೆಗೆ ಈಗ ರೂಪ:

ಈ ವ್ಯವಸ್ಥೆ ಜಾರಿಗೆ ತರುವ ಚಿಂತನೆ ಬಹಳ ಹಿಂದೆಯೇ ಪ್ರಾರಂಭವಾದರೂ, ತಂತ್ರಜ್ಞಾನ ಮತ್ತು ಮೂಲಸೌಕರ್ಯದ ಕೊರತೆಯಿಂದ ಮಧ್ಯದಲ್ಲೇ ನಿಂತಿತ್ತು. ಈಗ ಸ್ಮಾರ್ಟ್ ಸಿಟಿ ಯೋಜನೆಯಡಿ 250 ಹೊಸ ಸಿಸಿ ಕ್ಯಾಮರಾಗಳನ್ನು ಖರೀದಿಸಿ LHMS ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ತುಮಕೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿರುವ ಈ ಹೊಸ ವ್ಯವಸ್ಥೆ ಮನೆಗಳ್ಳತನ ನಿಯಂತ್ರಣಕ್ಕೆ ಎಷ್ಟು ಪರಿಣಾಮಕಾರಿಯಾಗುತ್ತದೆ ಎನ್ನುವುದನ್ನು ಮುಂದಿನ ದಿನಗಳು ನಿರ್ಧರಿಸಲಿವೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0