ಪೊಲೀಸರ ಕೆಸರುಗದ್ದೆ ಕ್ರೀಡಾಕೂಟ; ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಗೋಣಿಕೊಪ್ಪ ಪೊಲೀಸರು

ಪೊಲೀಸರ ಕೆಸರುಗದ್ದೆ ಕ್ರೀಡಾಕೂಟ; ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಗೋಣಿಕೊಪ್ಪ ಪೊಲೀಸರು

ವರದಿ:ಚೆಪ್ಪುಡಿರ ರೋಷನ್, ಪೊನ್ನಂಪೇಟೆ

ಗೋಣಿಕೊಪ್ಪ:ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸದಾ ಒತ್ತಡದಲ್ಲೇ ಕರ್ತವ್ಯ ನಿರ್ವಹಿಸುವ ಪೊಲೀಸರು, ಕರ್ತವ್ಯದ ಜಂಜಾಟವನ್ನು ಬದಿಗಿರಿಸಿ, ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ಪೊಲೀಸರ ಕೆಸರು ಗದ್ದೆ ಕ್ರೀಡಾಕೂಟವನ್ನು ಗೋಣಿಕೊಪ್ಪಲ್ಲಿನ ಕಾಳಪ್ಪ ಕಾಲೋನಿಯ ವಿ. ವಿ ಕಾಳಪ್ಪ ಅವರ ಗದ್ದೆಯಲ್ಲಿ ಆಯೋಜಿಸಲಾಗಿತ್ತು. 

 ಪುರುಷರಿಗೆ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಪುರುಷರಿಗೆ ವಾಲಿಬಾಲ್, ಕಬಡ್ಡಿ, ಓಟದ ಸ್ಪರ್ಧೆ, ಮಹಿಳೆಯರಿಗೆ ಥ್ರೋಬಾಲ್, ಪೊಲೀಸ್ ಹುದ್ದೆಯಲ್ಲಿರುವ ದಂಪತಿಗಳಿಗೆ ಕಪ್ಪಲ್ ರೇಸ್, ಪೊಲೀಸರ ಮಕ್ಕಳಿಗೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ತುಂಬಿ ತುಳುಕುತಿದ್ದ ಮಂಡಿವರೆಗಿನ ಕೆಸರಿನ ನೀರಿನಲ್ಲಿ ವಾಲಿಬಾಲ್ ಆಡಿದ ಪೊಲೀಸರು ಎದ್ದು ಬಿದ್ದು ಹೊರಳಾಡಿ ಗೆಲುವು ಸಾಧಿಸಲು ಸೆಣಸಾಡಿದರು. ಮತ್ತೊಂದೆಡೆ ಮಹಿಳೆಯರ ಹಗ್ಗ ಜಗ್ಗಾಟ ರಣರೋಚಕವಾಗಿತ್ತು. ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಹಿಳಾ ಪೊಲೀಸರು ಕೆಸರು ಗದ್ದೆಯಲ್ಲಿ ವರ್ಣರಂಜಿತ ಸಾಮಾನ್ಯ ಉಡುಗೆಯಲ್ಲಿ ಕಂಗೊಳಿಸಿದರು. ಓಟದ ಸ್ಪರ್ಧೆಯಲ್ಲಿಯೂ ಎದ್ದು ಬಿದ್ದು ಓಡುತ್ತಿದ್ದ ದೃಶ್ಯ ನೋಡುಗರನ್ನು ನಗೆಗಡಲಲ್ಲಿ ತೇಲಿಸಿತು. ಮಹಿಳಾ ಪೊಲೀಸರು, ಪುರುಷ ಪೊಲೀಸರು ಹಾಗೂ ಅವರ ಕುಟುಂಬದ ಮಕ್ಕಳು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಕೆಸರಿನೋಕುಳಿಯಲ್ಲಿ ಮಿಂದೆದ್ದರು. ಪುರುಷರ ನಡುವಿನ ಕಬಡ್ಡಿ ಪಂದ್ಯವು ಕೂಡ ಹಣಾಹಣಿಯಿಂದ ಕೂಡಿತ್ತು, ಎದುರಾಳಿ ಆಟಗಾರನನ್ನು ಹಿಡಿಯುವಾಗ ಕೆಸರು ನೀರಿನಲ್ಲಿ ಬಿದ್ದು ಹೊರಳಾಡುತ್ತಿದ್ದುದು ರೋಮಾಂಚಕಾರಿಯಾಗಿತ್ತು.

 ವಿಜೇತರು:

 ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವೀರಾಜಪೇಟೆ ನಗರ ಮತ್ತು ಗ್ರಾಮಾಂತರ ಪೊಲೀಸರು ಹಾಗೂ ಗೋಣಿಕೊಪ್ಪಲು ಪೊಲೀಸರು ಪಾರಮ್ಯ ಮೆರೆದು ಹಲವು ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಗೋಣಿಕೊಪ್ಪಲು ಪೊಲೀಸರು ( ಪ್ರಥಮ) ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸರು( ದ್ವಿತೀಯ) ಸ್ಥಾನ ಪಡೆದುಕೊಂಡರು. ಪುರುಷರ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಗೋಣಿಕೊಪ್ಪಲು ವೃತ್ತ ಪೊಲೀಸರು (ಪ್ರಥಮ) ಹಾಗೂ ವೀರಾಜಪೇಟೆ ವೃತ್ತ ಪೊಲೀಸರು ( ದ್ವಿತೀಯ) ಸ್ಥಾನ ಗಳಿಸಿದರು. ಪುರುಷರ ಕಬಡ್ಡಿಯಲ್ಲಿ ಶ್ರೀಮಂಗಲ ಪೊಲೀಸರು (ಪ್ರಥಮ) ಹಾಗೂ ವೀರಾಜಪೇಟೆ ನಗರ ಪೊಲೀಸರು ( ದ್ವಿತೀಯ) ಸ್ಥಾನ ಪಡೆದುಕೊಂಡರು. ಮಹಿಳೆಯರ ಥ್ರೋಬಾಲ್ ನಲ್ಲಿ ವೀರಾಜಪೇಟೆ ವೃತ್ತ ಮಹಿಳಾ ಪೊಲೀಸರು (ಪ್ರಥಮ) ,ಗೋಣಿಕೊಪ್ಪಲು ವೃತ್ತ ಮಹಿಳಾ ಪೊಲೀಸರು ( ದ್ವಿತೀಯ) ಸ್ಥಾನ ಪಡೆದುಕೊಂಡರು. ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವೀರಾಜಪೇಟೆ ಮಹಿಳಾ ಪೊಲೀಸರು (ಪ್ರಥಮ), ಗೋಣಿಕೊಪ್ಪಲು ಮಹಿಳಾ ಪೊಲೀಸರು (ದ್ವಿತೀಯ) ಸ್ಥಾನ ಪಡೆದುಕೊಂಡರು. ಪುರುಷರಿಗೆ ಕುಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಶ್ರೀಮಂಗಲ ಪೊಲೀಸ್ ಮಹಾದೇವ್ ( ಪ್ರಥಮ) , ಕುಟ್ಟ ಎಎಸ್ ಐ ಕಾರ್ಯಪ್ಪ ( ದ್ವಿತೀಯ) ಸ್ಥಾನ ಪಡೆದುಕೊಂಡರು.

 ಕಪಲ್ ರೇಸ್:

ಪೊಲೀಸ್ ದಂಪತಿ ಅನಿತಾ- ಮಲ್ಲಪ್ಪ (ಪ್ರಥಮ) ಹಾಗೂ ರಾಜೇಶ್ವರಿ- ಬಸವರಾಜು ದಂಪತಿ (ದ್ವಿತೀಯ), ಪೊಲೀಸ್ ಕುಟುಂಬ ಕಪ್ಪಲ್ ರೇಸ್‌ನಲ್ಲಿ ಆಲಿ ದಂಪತಿ( ಪ್ರಥಮ) ಹಾಗೂ ಮಂಜು ದಂಪತಿ ದ್ವಿತೀಯ, ಮಹಿಳಾ ಪೊಲೀಸ್ ಓಟದ ಸ್ಪರ್ಧೆಯಲ್ಲಿ ಶಿವಲಿಂಗಿ ಕೃಷ್ಣ ಪ್ರಸಾದ್ ( ಪ್ರಥಮ), ಅನಿತಾ ಮಲ್ಲಪ್ಪ (ದ್ವಿತೀಯ) ಹಾಗೂ ವತ್ಸಲಾ ಪ್ರಸನ್ನ( ತೃತೀಯ) ಸ್ಥಾನ ಪಡೆದುಕೊಂಡರು.

ಕುಟುಂಬದ ಯುವತಿಯರಿಗಾಗಿ ಓಟದ ಸ್ಪರ್ಧೆಯಲ್ಲಿ ಪ್ರಿಯಾಂಕ (ಪ್ರಥಮ), ವಿದ್ಯಾ ಬೆಳವಿ ( ದ್ವಿತೀಯ) ಹಾಗೂ ರಾಜೇಶ್ವರಿ ( ತ್ರತೀಯ,) ಹೆಣ್ಣು ಮಕ್ಕಳಿಗಾಗಿ ಓಟದ ಸ್ಪಧೆಯಲ್ಲಿ ಕುಮಾರಿ ನಿಧಿಶ್ರಿ ( ಪ್ರಥಮ), ಚಿಂತನಾ ( ದ್ವಿತೀಯ) ಹಾಗೂ ಸಾನಿಕ ( ತೃತೀಯ),

12 ವಯೋಮಾನ ಬಾಲಕರು:

ಬಿದ್ದಪ್ಪ, ಯಶಸ್ ಹಾಗೂ ಮೋಹಿತ್ ಕ್ರಮವಾಗಿ ಮೊದಲ ಮೂರು ಸ್ಥಾನ ಗೆದ್ದಿದ್ದಾರೆ. 12 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಾಸ್ಟರ್ ಜೀವನ್, ಮಾಸ್ಟರ್ ಅಭಯ್ ಹಾಗೂ ಮಾಸ್ಟರ್ ಪ್ರವರ್ಥ್ ಮೊದಲ ಮೂರು ಸ್ಥಾನ ಗೆದ್ದಿದ್ದಾರೆ. 18 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕ್ರಮವಾಗಿ ಕೌಶಿಕ್ ಎಂ.ಎo., ಕೆ.ಎನ್.ಕಾರ್ತಿಕ್ ಹಾಗೂ ದ್ರಾವಿಡ್ ಪೊನ್ನಣ್ಣ ಮೊದಲ ಮೂರು ಬಹುಮಾನ ಗೆದ್ದಿದ್ದಾರೆ ಸಹಾಯಕ ಉಪ ನಿರೀಕ್ಷರಿಗಾಗಿ ನಡೆದ ಓಟದ ಸ್ಪರ್ಧೆಯಲ್ಲಿ ಕಾರ್ಯಪ್ಪ, ಪ್ರಮೋದ್, ಪ್ರದೀಪ್ ಕುಮಾರ್ ಬಹುಮಾನ ಗೆದ್ದುಕೊಂಡರು. ಇದೇ ಸಂದರ್ಭ ಮಡಿಕೇರಿ ಪೊಲೀಸ್ ಉಪ ವಿಭಾಗ ತಂಡಕ್ಕೆ ವಿಶೇಷ ಪ್ರಶಸ್ತಿ, ಪೊಲೀಸ್ ಕುಟುಂಬದ ಮಹಿಳೆಯರಿಗೆ ನಡೆದ ಹಗ್ಗ ಜಗ್ಗಾಟದಲ್ಲಿ ವಿಶೇಷ ಸ್ಮರಣಿಕೆ, ಹಾಗೂ ಸಿದ್ಧಾಪುರ ಪೊಲೀಸರಿಗೂ ವಿಶೇಷ ಗೌರವ ನೀಡಲಾಯಿತು.