ಗೋಣಿಕೊಪ್ಪ ಮಾರುಕಟ್ಟೆ ಪ್ರದೇಶದಲ್ಲಿ ಪೊಲೀಸರ ಪೆಟ್ರೋಲಿಂಗ್
admincoorgdaily

ಪೊನ್ನಂಪೇಟೆ,ಆ23: ಗೋಣಿಕೊಪ್ಪ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಅನಧಿಕೃತ ವಾಹನ ನಿಲುಗಡೆ, ರಸ್ತೆ ಅತಿಕ್ರಮಣ ಹಾಗೂ ವಿವಿಧ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗೋಣಿಕೊಪ್ಪ ಪೊಲೀಸರು ಫೂಟ್ ಪೆಟ್ರೋಲಿಂಗ್ ನಡೆಸಿದರು.
ಠಾಣಾಧಿಕಾರಿ ಕಾಳೇಗೌಡ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಮಾರುಕಟ್ಟೆ ಪ್ರದೇಶದಲ್ಲಿ ಕಾಲ್ನಡಿಗೆ ಗಸ್ತು ನಡೆಸಿ ಪರಿಶೀಲನೆ ಕೈಗೊಂಡರು. ಈ ವೇಳೆ ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸಿರುವುದು, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಅಂಗಡಿಗಳನ್ನು ವಿಸ್ತರಿಸಿರುವುದು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ನಡೆಯಬಹುದಾದ ಅಕ್ರಮ ಚಟುವಟಿಕೆಗಳ ಮೇಲೂ ಪೊಲೀಸರು ವಿಶೇಷ ನಿಗಾ ವಹಿಸಿದರು. ಗಾಂಜಾ ಸೇರಿದಂತೆ ಎನ್‌ಡಿಪಿಎಸ್ ಕಾಯ್ದೆಗೆ ಸಂಬಂಧಿಸಿದ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಯಿತು.
ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತಹ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ವ್ಯಾಪಾರಸ್ಥರಿಗೆ ಪೊಲೀಸರು ಸೂಚಿಸಿದರು. ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಮನವಿ ಮಾಡಿದರು.