ಪೊನ್ನಂಪೇಟೆ: ಕಿಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದ ವತಿಯಿಂದ ಪಂಜಿನ ಮೆರವಣಿಗೆ

Aug 4, 2026 - 22:08
 0  2
ಪೊನ್ನಂಪೇಟೆ: ಕಿಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದ ವತಿಯಿಂದ ಪಂಜಿನ ಮೆರವಣಿಗೆ

ಪೊನ್ನಂಪೇಟೆ, ಆ.3: ಕೊಡವ ಹಿತ ರಕ್ಷಣಾ ಬಳಗ ಕ್'ಗ್ಗಟ್ಟ್ ನಾಡ್–ಪೊನ್ನಂಪೇಟೆ ವತಿಯಿಂದ 15ನೇ ವರ್ಷದ 'ಕಕ್ಕಡ ಪದ್‌ನೆಟ್ಟ್' ಆಚರಣೆಯು ಸೋಮವಾರದಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಚೆಪ್ಪುಡೀರ ಡಾ. ಜಿ. ಕುಶಾಲಪ್ಪ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಸಂಜೆ ಪೊನ್ನಂಪೇಟೆ ಮುಖ್ಯ ಬೀದಿಯಲ್ಲಿ ಸಾಂಪ್ರದಾಯಿಕ 'ತೂಡ್' (ಪಂಜಿನ) ಮೆರವಣಿಗೆ ನಡೆಯಿತು. ಮೆರವಣಿಗೆಯು ಬಸ್ ನಿಲ್ದಾಣದವರೆಗೆ ಸಾಗಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಕೊಡವರು ಸಾಂಪ್ರದಾಯಿಕ ವಾಲಗತಾಟ್‌ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಚೆಪ್ಪುಡೀರ ಡಾ. ಜಿ. ಕುಶಾಲಪ್ಪ, ಕೊಡಗಿನ ದೇವರ ಕಾಡುಗಳಲ್ಲಿ ನಮ್ಮ ಪೂರ್ವಿಕರು ದೇವರನ್ನು ಪ್ರತಿಷ್ಠಾಪಿಸಿರುವುದು ಕೊಡವ ಜನಾಂಗದ ವಿಶಿಷ್ಟ ಪರಂಪರೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ನಮ್ಮ ಭೂಮಿಯನ್ನು ಹೊರಗಿನವರಿಗೆ ಮಾರಾಟ ಮಾಡುವ ಮೂಲಕ ನಮ್ಮ ಅಸ್ತಿತ್ವ ಹಾಗೂ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಕುರಿತು ಗಂಭೀರವಾಗಿ ಚಿಂತಿಸುವ ಅಗತ್ಯವಿದ್ದು, ಕೊಡವರ ಮಂದ್ , ಮಾನಿ ಸಂಪ್ರದಾಯವನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜನಾಂಗಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಹಿಂದೆ ಕೂಟು ಪದ್ಧತಿಯಲ್ಲಿ ಕೃಷಿ ನಡೆಸಲಾಗುತ್ತಿತ್ತು. ಅಂತಹ ಕೃಷಿ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೊಡವ ಸಂಘ-ಸಂಸ್ಥೆಗಳು ಸದಾ ಸಹಕಾರ ನೀಡಲು ಸಿದ್ಧವಾಗಿವೆ. ಪೋಷಕರು ತಮ್ಮ ಮಕ್ಕಳಿಗೆ ಕೊಡಗಿನ ಕೃಷಿ ಪದ್ಧತಿ ಹಾಗೂ ಸಂಸ್ಕೃತಿಯ ಮಹತ್ವವನ್ನು ತಿಳಿಸಿ, ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಮಾತನಾಡಿ, ಕೊಡವರ ಎಲ್ಲ ಹಬ್ಬ-ಹರಿದಿನಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಪ್ರತಿಯೊಬ್ಬರೂ ಪ್ರಕೃತಿಯನ್ನು ಆರಾಧಿಸಿ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕೊಡವ ಸಂಸ್ಕೃತಿಯ ಸಂರಕ್ಷಣೆಗಾಗಿ ಕೊಡವ ಸಮಾಜದ ವತಿಯಿಂದ ವಾಲಗ ಆಟ್ ಪೈಪೋಟಿ ಹಾಗೂ ಕಾಳಿಮಾಡ ಒಕ್ಕದ ವತಿಯಿಂದ ಕೊಡವ ಮಂಗಲ ಸಂಬಂಧ ಅಡುಕುವ ಸ್ಪರ್ಧೆಯನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಎಲ್ಲಾ ಕೊಡವ ಬಾಂಧವರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕೊಡವ ಹಿತ ರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾನಂಜಪ್ಪ ಮಾತನಾಡಿ, ಕೊಡವ ಸಮುದಾಯದ ಯುವಜನರು ತಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಜನಾಂಗದ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತರಾಗಬೇಕು. ಅಂತರ್ಜಾತಿ ವಿವಾಹಗಳು ಹೆಚ್ಚುತ್ತಿರುವುದು ಜನಾಂಗದ ಅಸ್ತಿತ್ವದ ದೃಷ್ಟಿಯಿಂದ ಗಂಭೀರ ವಿಚಾರವಾಗಿದ್ದು, ಮಕ್ಕಳಲ್ಲಿ ಕೊಡವ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.99.2 ಅಂಕ ಗಳಿಸಿದ ಗೋಣಿಕೊಪ್ಪಲಿನ ಲಯನ್ಸ್ ಶಾಲೆಯ ವಿದ್ಯಾರ್ಥಿ ನೆಲ್ಲಮಾಡ ಸಿದ್ದಾಂತ್ ಕಾವೇರಪ್ಪ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.99.3 ಅಂಕ ಪಡೆದ ಸಿಐ ಪಿಯು ಕಾಲೇಜಿನ ವಿದ್ಯಾರ್ಥಿನಿ ಕಾಟಿಮಾಡ ಭಾಷಿತ ದೇವಯ್ಯ ಅವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 'ಕುರ್ಕಂಗ' ಕೊಡವ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಚಕ್ಕೆರ ರಮೇಶ್, ಗೌರವ ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಬಳಗದ ಸದಸ್ಯರು ಸೇರಿದಂತೆ ನೂರಾರು ಕೊಡವರು ಭಾಗವಹಿಸಿದ್ದರು. ಸಮಾರಂಭದ ಬಳಿಕ ನೆರೆದಿದ್ದವರಿಗೆ ಕಕ್ಕಡ ಪದ್‌ನೆಟ್ಟ್‌ನ ವಿಶೇಷ ಖಾದ್ಯವಾದ ಮದ್ದ್ ಪುಟ್ಟ್ ಹಾಗೂ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0